

ಶನಿವಾರಸಂತೆ: ಗುಡುಗಳಲೆ ಜಯದೇವ ಜಾನುವಾರುಗಳ ಜಾತ್ರೆ ಪ್ರಯುಕ್ತ ಸೋಮವಾರ ಜಾತ್ರಾ ಸಮಿತಿ ವತಿಯಿಂದ ಜಾತ್ರಾ ಮೈದಾನದಲ್ಲಿ ಮಹಿಳೆಯರಿಗೆ ಮುಕ್ತ ಥ್ರೋಬಾಲ್ ಪಂದ್ಯಾವಳಿ ಹಮ್ಮಿಕೊಳ್ಳಲಾಗಿತ್ತು.
ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದ ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾದೀಶ ಶ್ರೀ ಸದಾಶಿವ ಸ್ವಾಮೀಜಿ, ಜಾತ್ರೆ ಅಂಗವಾಗಿ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ. ಈ ಭಾಗದ ಜನರಿಗೆ ಮನರಂಜನೆ ನೀಡುವಂತಹ ಉತ್ತಮ ಕೆಲಸವನ್ನು ಜಾತ್ರಾ ಸಮಿತಿ ಮಾಡುತ್ತಿರುವುದು ಸಂತಸಕರ ಎಂದರು.
ಕ್ರೀಡಾ ಚಟುವಟಿಕೆಯಿಂದ ಆರೋಗ್ಯ ವೃದ್ಧಿಸುವುದರ ಜತೆಗೆ ಮಾನಸಿಕ ನೆಮ್ಮದಿ ದೊರೆಯಲಿದೆ. ಜಾತ್ರೋತ್ಸವಗಳು ಜನರಿಗೆ ಮನರಂಜನೆ ನೀಡುವುದರ ಜತೆಯಲ್ಲಿ ಸಂಸ್ಕೃತಿಯನ್ನು ಎತ್ತಿ ಹಿಡಿಯುತ್ತವೆ. ನಮ್ಮ ಹಿರಿಯರು ಹಾಕಿಕೊಟ್ಟ ಮಾರ್ಗವನ್ನು ನಾವುಗಳು ಮುಂದುವರಿಸಿಕೊಂಡು ಹೋಗಬೇಕೆಂದು ಸಲಹೆ ನೀಡಿದರು.
ಜಾತ್ರಾ ಸಮಿತಿ ಅಧ್ಯಕ್ಷ ಎಚ್.ಎಂ.ವಿವೇಕ್, ಥ್ರೋಬಾಲ್ ಕ್ರೀಡಾ ಸಮಿತಿ ಅಧ್ಯಕ್ಷ ಬಸವರಾಜು, ಉಪಾಧ್ಯಕ್ಷೆ ಉಷಾ, ಕಾರ್ಯದರ್ಶಿ ರೂಪಾ, ಉಪ ಕಾರ್ಯದರ್ಶಿ ಸುವರ್ಣಾ, ಕ್ರೀಡಾ ಬಹುಮಾನಗಳ ದಾನಿಗಳಾದ ಮಂಜುನಾಥ್, ಪುನೀತ್ ತಾಳೂರು, ಮೂರ್ತಿ ಬೆಟ್ಟದಳ್ಳಿ, ಹಂಡ್ಲಿ ಗ್ರಾ.ಪಂ. ಅಧ್ಯಕ್ಷೆ ಸುಧಾ ಈರೇಶ್, ಉಪಾಧ್ಯಕ್ಷ ಅಶೋಕ್ ಇತರರು ಹಾಜರಿದ್ದರು.