

ತರೀಕೆರೆ: ದೈಹಿಕ ಸದೃಢತೆ, ಭವಿಷ್ಯ ರೂಪಿಸಿಕೊಳ್ಳಲು ಹಾಗೂ ಭಾಂದವ್ಯ ವೃದ್ಧಿಗೂ ಕ್ರೀಡೆ ಸಹಕಾರಿ ಎಂದು ಗ್ರಾಪಂ ಅಧ್ಯಕ್ಷ ಇ.ಟಿ.ಕಾಂತಕುಮಾರನಾಯ್ಕ ಹೇಳಿದರು.
ತಾಲೂಕಿನ ಇಟ್ಟಿಗೆ ಗ್ರಾಮದಲ್ಲಿ ಆರಂಭವಾದ ಐಪಿಎಲ್ ಇಟ್ಟಿಗೆ ಪ್ರೀಮಿಯರ್ ಲೀಗ್ ಸೀಸನ್-4ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಗ್ರಾಮಾಂತರ ಪ್ರದೇಶಗಳಲ್ಲೂ ಕ್ರಿಕೆಟ್ ಕ್ರೇಜ್ ಹೆಚ್ಚಾಗುತ್ತಿದೆ. ಈ ಬೆಳವಣಿಗೆ ಉತ್ತಮವಾದರೂ, ವಿದ್ಯಾರ್ಥಿಗಳು ಕ್ರೀಡೆ ಜತೆಗೆ ಓದಿಗೂ ಆದ್ಯತೆ ನೀಡಬೇಕು. ಪರಿಣಿತರ ಮಾರ್ಗದರ್ಶನದಲ್ಲಿ ಉತ್ತಮ ಅಭ್ಯಾಸ ನಡೆಸಿ ರಾಜ್ಯಮತ್ತು ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯುವ ಗುರಿ ಹೊಂದಬೇಕು ಎಂದರು.
ಗ್ರಾಪಂ ಸದಸ್ಯ ಇ.ನಾಗರಾಜ್ ಮಾತನಾಡಿ, ಯುವಕರು ಕ್ರೀಡೆಯಲ್ಲಿ ಆಸಕ್ತಿ ತೋರುತ್ತಿರುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ. ಗ್ರಾಮದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಕ್ರಿಕೆಟ್‌ಲೀಗ್ ಪಂದ್ಯಾವಳಿ ಆಯೋಜಿಸಲಾಗುತ್ತಿದೆ. ಇದರಿಂದ ಸ್ಥಳೀಯ ಆಟಗಾರರಿಗೆ ಪ್ರೋತ್ಸಾಹ ದೊರೆಯುತ್ತದೆ. ಮೂರು ದಿನ ನಡೆಯುವ ಪಂದ್ಯಾವಳಿಯಲ್ಲಿ ಹರಾಜು ಮೂಲಕ ಆಯ್ಕೆಯಾಗಿರುವ ಸ್ಥಳೀಯ 6 ತಂಡಗಳು ಪರಸ್ಪರ ಸೆಣಸಾಟ ನಡೆಸಲಿವೆ ಎಂದು ಮಾಹಿತಿ ನೀಡಿದರು.
ತಾಪಂ ಮಾಜಿ ಸದಸ್ಯ ಟಿ.ವಿಜಯನಾಯ್ಕ, ಪ್ರಮುಖರಾದ ನಾಗರಾಜ್, ಶರತ್, ಕೇಶವ, ಪರಮೇಶ್, ಕಾರ್ತಿಕ್ ಮತ್ತಿತರರಿದ್ದರು.