

ಯಳಂದೂರು: ತಾಲೂಕಿನ ಉಪ್ಪಿನಮೋಳೆ ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಚಾಮರಾಜನಗರದ ವೀರಾಂಜನೆಯ ತಂಡ ಪ್ರಥಮ ಸ್ಥಾನ ಸಹಿತ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.
24 ತಂಡಗಳು ಭಾಗವಹಿಸಿದ್ದ ಈ ಪಂದ್ಯಾವಳಿಯಲ್ಲಿ ಅಂತಿಮ ಸುತ್ತಿಗೆ ಉಪ್ಪಿನಮೋಳೆ-ಎ ತಂಡ ಹಾಗೂ ಚಾಮರಾಜನಗರದ ವೀರಾಂಜನೇಯ ತಂಡಗಳು ಸೆಣಸಿದವು. ಡಾ. ಪುನೀತ್ ರಾಜ್‌ಕುಮಾರ್ ಪುಣ್ಯಸ್ಮರಣೆ ಅಂಗವಾಗಿ ಆಯೋಜಿಸಿದ್ದ ಹೊನಲು ಬೆಳಕಿನ ಪಂದ್ಯಾವಳಿಯನ್ನು ಗ್ರಾಮದ ಸಾಲ್ಟ್ ಸಿಟಿ ಬಾಯ್ಸ ಬಳಗ ಆಯೋಜನೆ ಮಾಡಿತ್ತು. ಅಂತಿಮ ಹಣಾಹಣಿಯಲ್ಲಿ ಚಾಮರಾಜನಗರ ವೀರಾಂಜನೇಯ ತಂಡ 17 ಅಂಕ ಹಾಗೂ ಉಪ್ಪಿನಮೋಳೆ ತಂಡ 15 ಅಂಕಗಳನ್ನು ಪಡೆದವು. ವೀರಾಂಜನೇಯ ತಂಡ ವಿಜಯಶಾಲಿಯಾದರೆ ಉಪ್ಪಿನಮೋಳೆ ತಂಡ 2ನೇ ಸ್ಥಾನ ಪಡೆದುಕೊಂಡಿತು.
ಪ್ರಥಮ ಸ್ಥಾನ ವಿಜೇತ ತಂಡಕ್ಕೆ 10 ಸಾವಿರ ರೂ. ನಗದು ಹಾಗೂ ಟ್ರೋಫಿ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ 5 ಸಾವಿರ ರೂ. ನಗದು ಹಾಗೂ ಟ್ರೋಫಿಯನ್ನು ಗ್ರಾಮದ ಯಜಮಾನರು ನೀಡಿ ಗೌರವಿಸಿದರು. ಇದಕ್ಕೂ ಮೊದಲು ಶಾಸಕ ಎ.ಆರ್. ಕೃಷ್ಣಮೂರ್ತಿ ಆಟಗಾರರಿಗೆ ಶುಭ ಹಾರೈಸಿದರು.