

ಕುಶಾಲನಗರ
ವಿದ್ಯಾರ್ಥಿಗಳು ಕ್ರೀಡೆಯ ಮುಖಾಂತರ ಆತ್ಮವಿಶ್ವಾಸವನ್ನು ಮೈಗೂಡಿಸಿಕೊಂಡು, ಕ್ರಿಯಾಶೀಲತೆಯಿಂದ ತಮ್ಮ ಸಾಧನೆಯ ಮೂಲಕ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯವಾಗುವುದು ಎಂದು ಕುಶಾಲನಗರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಉಪನಿರ್ದೇಶಕರ ಕಚೇರಿ, ಶಾಲಾಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಸೋಮವಾರಪೇಟೆ ಹಾಗೂ ಕೂಡಿಗೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಸಂಯುಕ್ತ ಆಶ್ರಯದಲ್ಲಿ ಕೂಡಿಗೆಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಸೋಮವಾರಪೇಟೆ ತಾಲೂಕು ಹಾಗೂ ಕೊಡಗು ಜಿಲ್ಲಾಮಟ್ಟದ 14 ಮತ್ತು 17 ರ ವಯೋಮಾನದ ಬಾಲಕ ಬಾಲಕಿಯರ ಕ್ರೀಡಾಕೂಟದ ಧ್ವಜಾರೋಹಣ ನೆರವೇರಿಸಿ ಮಂಗಳವಾರ ಮಾತನಾಡಿದರು.
ಕ್ರೀಡೆಯು ಪಠ್ಯದ ವಿಷಯಗಳ ಜತೆಯಲ್ಲಿ ಐಕ್ಯತೆ, ಒಗ್ಗೂಡುವಿಕೆ ಮೂಲಕ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರಿಯಾಗಿದೆ. ಶಾಲೆಗಳಲ್ಲಿ ವಿದ್ಯಾಭ್ಯಾಸದ ಜತೆಯಲ್ಲಿ ಕ್ರೀಡೆಗೆ ಉತ್ತೇಜನ ನೀಡಲು ದೈಹಿಕ ಶಿಕ್ಷಕರ ನೇಮಕ ಅಗಬೇಕಾಗಿದೆ. ಅಲ್ಲದೆ ಸಾವಿರಾರು ಕ್ರೀಡಾಪಟುಗಳಿಗೆ ತರಬೇತಿ ನೀಡಿದ ಕೂಡಿಗೆ ಕ್ರೀಡಾಂಗಣದ ಅಭಿವೃದ್ಧಿಗೆ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದ ಉದ್ಘಾಟಿಸಿದ ಕೂಡಿಗೆ ಡಯಟ್ ಪ್ರಾಂಶುಪಾಲ ಡಿ. ಉದಯಕುಮಾರ್ ಮಾತನಾಡಿ ಪಠ್ಯ ಶಿಕ್ಷಣದಷ್ಟೇ ಮಹತ್ವ ಕ್ರೀಡೆಗೆ ಇದೆ. ವಿದ್ಯಾರ್ಥಿಗಳು ಕ್ರೀಡೆ, ಸೇರಿದಂತೆ ಎಲ್ಲಾ ಕ್ಷೇತ್ರದಲ್ಲಿ ತಾವು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ತೊಡಗಿಸಿಕೊಳ್ಳುವ ಮೂಲಕ ಉನ್ನತ ಮಟ್ಟಕ್ಕೆ ಸಾಗುವಂತಾಗಬೇಕು. ಇದಕ್ಕೆ ಸಹಕಾರವನ್ನು ಶಿಕ್ಷಣ ಇಲಾಖೆ ನೀಡುತ್ತಿದೆ. ಅದರ ಸದುಪಯೋ ಪಡೆದುಕೊಳ್ಳಬೇಕು ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಹೆಚ್.ಎಸ್. ಚೇತನ್ ಮಾತಾನಾಡುತ್ತಾ ಶಿಸ್ತು ಸಂಯಮದ ಜತೆಯಲ್ಲಿ ಕ್ರೀಡೆ ಆರೋಗ್ಯ ವೃದ್ಧಿಗೆ ಸಹಕಾರಿ. ಪ್ರಾಥಮಿಕ ಹಂತದಲ್ಲಿ ವಿದ್ಯಾರ್ಥಿಗಳು ಒಳ್ಳೆಯ ಹವ್ಯಾಸವನ್ನು ಬೆಳೆಸಿಕೊಂಡು ಭವಿಷ್ಯವನ್ನು ಉಜ್ವಲಗೂಳಿಸಿಕೊಳ್ಳಬೇಕು ಎಂದರು.
ಕ್ರೀಡಾಧಿಕಾರಿ ಡಾ. ಸದಾಶಿವಯ್ಯ ಎಸ್. ಪಲ್ಲೇದ್ ಪ್ರಸ್ತಾವಿಕ ನುಡಿಗಳನ್ನು ಆಡಿದರು. ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಎಸ್. ಪ್ರಸನ್ನಕುಮಾರ್, ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್. ಜಿ. ಕುಮಾರ್, ಸೋಮವಾರಪೇಟೆ ತಾಲೂಕು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪ್ರದೀಪ್, ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಿ. ಎಂ. ಹೇಮಂತ್, ಸೋಮವಾರಪೇಟೆ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಟಿ.ಕೆ. ಬಸವರಾಜು, ಪ್ರಾಥಮಿಕ ಶಾಲಾ ರಾಜ್ಯ ಶಿಕ್ಷಕರ ಸಂಘದ ಉಪಾಧ್ಯಕ್ಷ ಹೆಚ್.ಎನ್. ಮಂಜುನಾಥ ಮತ್ತಿತರರು ಇದ್ದರು.