

ನಾಪೋಕ್ಲು: ಗ್ರಾಮೀಣ ಕ್ರೀಡೆ ಉಳಿಸಿ ಬೆಳೆಸಲು ಕ್ರೀಡಾಕೂಟಗಳು ಅತ್ಯಂತ ಮಹತ್ವ ಪಡೆಯುತ್ತದೆ ಎಂದು ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು.
ಮರಂದೋಡು ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಆಟದ ಮೈದಾನದಲ್ಲಿ ಶನಿವಾರ ಕುಂಜಿಲಾ -ಕಕ್ಕಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ಆಯೋಜಿಸಿದ್ದ 42ನೇ ವಾರ್ಷಿಕ ಕ್ರೀಡಾಕೂಟ ಕಾರ್ಯಕ್ರಮದಲ್ಲಿ ಮಾತನಾಡಿದರು.
ವರ್ಷದಲ್ಲಿ ಒಂದು ಬಾರಿ ಗ್ರಾಮಸ್ಥರು ಒಂದೆಡೆ ಸೇರಿ ಕ್ರೀಡಾಕೂಟದಲ್ಲಿ ಭಾಗವಹಿಸುವುದರಿಂದ ಗ್ರಾಮದಲ್ಲಿ ಒಗ್ಗಟ್ಟು ಮತ್ತಷ್ಟು ಜಾಸ್ತಿಯಾಗಲಿದೆ. ಕ್ರೀಡೆಗೆ ಹೆಸರುವಾಸಿಯಾದ ನಮ್ಮ ಕೊಡಗು ಜಿಲ್ಲೆಯ ಇತಿಹಾಸಕ್ಕೆ ಮತ್ತೊಂದು ಬಲ ಬಂದಂತಾಗಿದೆ ಎಂದರು. ತಮ್ಮೆಲ್ಲ ಕೆಲಸದ ಒತ್ತಡಗಳನ್ನು ಬದಿಗಿಟ್ಟು, ಈ ದಿನ ಗ್ರಾಮಸ್ಥರು ಒಟ್ಟಾಗಿ ಆಟದಲ್ಲಿ ಭಾಗವಹಿಸಿರುವುದನ್ನು ನೋಡಲು ನಿಜವಾಗಿ ಸಂತೋಷ ಆಗುತ್ತಿದೆ ಎಂದರು.
ಈ ಭಾಗದಲ್ಲಿ ಕ್ರೀಡಾಂಗಣ ನಿರ್ಮಿಸಲು ಎಲ್ಲ ಸಹಕಾರ ನೀಡುವುದಾಗಿ ಹೇಳಿದ ಶಾಸಕರು, ಈಗಾಗಲೇ ಈ ಭಾಗ ಹಲವು ರಸ್ತೆಗಳ ಅಭಿವೃದ್ಧಿಗೆ ಬೇಡಿಕೆ ಬಂದಿದ್ದು ಹಂತ ಹಂತವಾಗಿ ಎಲ್ಲವನ್ನೂ ಈಡೇರಿಸುವುದಾಗಿ ಭರವಸೆ ನೀಡಿದರು. ಕೆಲವು ರಸ್ತೆಗಳಿಗೆ ಸ್ಥಳದಲ್ಲೇ ಅನುದಾನ ಸಹ ಒದಗಿಸಿದರು. ಇತ್ತೀಚಿನ ದಿನಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಸಹಿಸದ ಬಿಜೆಪಿಯವರು, ಹತಾಶೆಯಿಂದ ಇಲ್ಲ ಸಲ್ಲದ ಅಪಪ್ರಚಾರ ಮಾಡುವುದರಲ್ಲಿ ತೊಡಗಿದ್ದಾರೆ. ಅಂತಹ ಸುಳ್ಳುಗಳಿಗೆ ಕೊಡಗಿನ ಪ್ರಜ್ಞಾವಂತ ಜನರು ಮೋಸ ಹೋಗುವುದಿಲ್ಲ ಎಂದು ಹೇಳಿದ ಶಾಸಕರು ನಾವೆಲ್ಲರೂ ಒಗ್ಗಟ್ಟಾಗಿ ಅಭಿವೃದ್ಧಿ ಕಡೆ ಹೆಜ್ಜೆ ಹಾಕೋಣ ಎಂದರು.
ಗ್ರಾಮ ಪಂಚಾಯಿತಿ ಸದಸ್ಯ ಚೊಯಮಾಡಂಡ ಹರೀಶ್ ಮೊಣ್ಣಪ್ಪ, ಮಾಜಿ ಸೈನಿಕರಾದ ಸಾಬು, ವಿಜಯ, ಸೂರಿ ಮುತ್ತಪ್ಪ, ಕೆ.ಆರ್.ಲೀಲಾವತಿ, ಕ್ರೀಡಾಕೂಟದ ಸಮಿತಿ ಕಾರ್ಯದರ್ಶಿ ಮುಕಟೀರ ಅಜಿತ್, ಖಜಾಂಚಿ ಚಂಡಿರ ರಾಲಿ ಗಣಪತಿ, ಕೆಡಿಪಿ ಸದಸ್ಯರಾದ ಬಾಚಮಾಂಡ ಲವ ಚಿಣ್ಣಪ್ಪ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಅತಾರ್ಂಡ ಶೈಲಾ ಕುಟ್ಟಪ್ಪ ಇತರರು ಇದ್ದರು.
ಇದಕ್ಕೂ ಮೊದಲು ಬೆಳಗ್ಗೆಯಿಂದಲೇ ಗ್ರಾಮಸ್ಥರಿಗೆ ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸಿದ್ದು ವಿಜೇತರಾದ ಅವರಿಗೆ ಬಹುಮಾನವನ್ನು ವಿತರಿಸಿ ಶುಭ ಹಾರೈಸಲಾಯಿತು. ಬಳಿಕ ವಿವಿಧ ಸಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.