

ಕುಶಾಲನಗರ:
ಶಿಕ್ಷಕರ ದಿನಾಚರಣೆ ಅಂಗವಾಗಿ ಪ್ರಾಥಮಿಕ ಶಾಲಾ ಶಿಕ್ಷಕರು ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ ಕೂಡಿಗೆಯ ಡಯಟ್ ಸಂಸ್ಥೆಯ ಮೈದಾನದಲ್ಲಿ ಶನಿವಾರ ತಾಲೂಕು ಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಸ್ಪರ್ಧಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಕೃಷ್ಣಪ್ಪ ಮಕ್ಕಳ ಪ್ರತಿಭೆಗಳನ್ನು ಗುರುತಿಸಿ ಪೋತ್ಸಾಹಿಸುವುದಲ್ಲಿ ಹೆಚ್ಚಿನ ಗಮನ ಹರಿಸುವ ಶಿಕ್ಷಕರು ಬಹುತೇಕ ಸಂದರ್ಭಗಳಲ್ಲಿ ತಮ್ಮ ಆಸಕ್ತಿಯ ಕ್ರೀಡೆ, ಸಾಂಸ್ಕೃತಿಕ ಹವ್ಯಾಸಗಳನ್ನು ಮರೆತು ಬಿಟ್ಟಿರುತ್ತಾರೆ. ಹೀಗಾಗಿ ಇಂಥ ಸಾಂಸ್ಕೃತಿಕ ಹಾಗೂ ಕ್ರೀಡಾಕೂಟಗಳು ಶಿಕ್ಷಕರಿಗೆ
ವೃತ್ತಿ ಜೀವನದಲ್ಲಿ ಚಿರಸ್ಮರಣಿಯವಾಗಿ ಉಳಿಯುತ್ತವೆ.
ಕ್ರೀಡಾಕೂಟದಲ್ಲಿ ಶಿಕ್ಷಕರು ಉತ್ಸಾಹದಿಂದ ಪಾಲ್ಗೊಂಡಿರುವುದು ಒಳ್ಳೆಯ ಬೆಳವಣಿಗೆ. ಶಿಕ್ಷಕರ ದಿನವನ್ನು ಭಾರತದ ಎರಡನೇ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ನೆನಪಿನಲ್ಲಿ ಆಚರಿಸಲಾಗುತ್ತದೆ. ಅವರು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸುವುದು ಇದರ ಉದ್ದೇಶ ಎಂದರು.
ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಎಸ್. ಚೇತನ್ ಮಾತನಾಡಿ, ಇಂಥ ಸ್ಪರ್ಧೆಗಳು ಶಿಕ್ಷಕರ ದಿನನಿತ್ಯದ ಚಟುವಟಿಕೆಗಳಿಗೆ ಹೆಚ್ಚಿನ ಉತ್ಸಾಹ ಹಾಗೂ ಪ್ರೇರಣೆ ನೀಡುತ್ತವೆ. ಶಿಕ್ಷಕರು ಮಕ್ಕಳ ಕಲಿಕೆ ಜತೆಗೆ ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಉತ್ತಮ ವೇದಿಕೆ ಒದಗಿಸುತ್ತವೆ ಎಂದರು.
ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಟಿ.ಕೆ. ಬಸವರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಎಸ್.ಎ. ಯೋಗೇಶ್, ಅಬ್ದುಲ್ ರಬ್, ಝಾನ್ಸಿ, ಕ್ಷೇತ್ರ ಸಮನ್ವಯಾಧಿಕಾರಿ ಎಂ.ವಿ. ಮಂಜೇಶ್, ತಾಲೂಕು ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಜಿ.ಎಂ. ಹೇಮಂತ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಎಚ್.ಎನ್. ಮಂಜುನಾಥ್, ಸಂಘದ
ಜಿಲ್ಲಾಧ್ಯಕ್ಷ ಕೆ.ಎಸ್. ಪ್ರಸನ್ನಕುಮಾರ್, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಡಾ ಸದಾಶಿವಯ್ಯ ಎಸ್. ಪಲ್ಲೇದ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪ್ರದೀಪ್, ನಿರ್ದೇಶಕ ಯಶವಂತ್ ಮತ್ತಿತರರು ಇದ್ದರು.
ಶಿಕ್ಷಕರು ವಿವಿಧ ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ, ಕ್ರೀಡಾ ಸ್ಫೂರ್ತಿಯೊಂದಿಗೆ ವಿವಿಧ ಕಲೆಗಳನ್ನು ಅನಾವರಣಗೊಳಿಸಿದರು.
ಶಿಕ್ಣಕಿಯರು ಹಾಡುಗಾರಿಕೆ, ಜಾನಪದ ನೃತ್ಯ, ರಸಪ್ರಶ್ನೆ ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ಪ್ರೇಕ್ಷಕರ ಗಮನ ಸೆಳೆದರು. ಕ್ರೀಡಾಕೂಟದ ಅಂಗವಾಗಿ ಪುರುಷ ಶಿಕ್ಷಕರಿಗೆ ವಾಲಿಬಾಲ್, ಕಬಡ್ಡಿ, ಕ್ರಿಕೆಟ್ ಟೂರ್ನಿಗಳು, ಮಹಿಳಾ ಶಿಕ್ಷಕಿಯರು ಥ್ರೋಬಾಲ್ ಮತ್ತಿತರ ಕ್ರೀಡೆಗಳನ್ನು ಏರ್ಪಡಿಸಲಾಗಿತ್ತು.