ಭಾಗಮಂಡಲದಲ್ಲಿ ಹೋಬಳಿ ಮಟ್ಟದ ಕೆಸರು ಗದ್ದೆ ಕ್ರೀಡಾಕೂಟ

sports
Published on

ಭಾಗಮಂಡಲ:

ಭಾಗಮಂಡಲ ಗ್ರಾಮ ಪಂಚಾಯತ್ ವತಿಯಿಂದ ಶುಕ್ರವಾರ ಹೋಬಳಿ ಮಟ್ಟದ ಕೆಸರುಗದ್ದೆ ಕ್ರೀಡಾಕೂಟ ಆಯೋಜಿಸಲಾಗಿತ್ತು. 79ನೇ ಸ್ವಾತಂತ್ರö್ಯ ದಿನಾಚರಣೆ ಅಂಗವಾಗಿ ಬಳ್ಳಡ್ಕ ಅಪ್ಪಾಜಿ ಮತ್ತು ಅನು ಅವರ ಗದ್ದೆಯಲ್ಲಿ ನಡೆದ ಹಗ್ಗಜಗ್ಗಾಟ, ಶಾಲಾ ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ಓಟದ ಸ್ಪರ್ಧೆ ಸಾರ್ವಜನಿಕರನ್ನು ಆಕರ್ಷಿಸಿತು.

ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಭಾಗಮಂಡಲ ವಿಎಸ್‌ಎಸ್‌ಎನ್ ಅಧ್ಯಕ್ಷ ಹೊಸೂರು ಸತೀಶ್ ಜೋಯಪ್ಪ, ಇತ್ತೀಚೆಗೆ ಪಾಕಿಸ್ತಾನ ಭಾರತದ ಮೇಲೆ ದಾಳಿ ಮಾಡಿದ ಸಂದರ್ಭ ಹೆಮ್ಮೆಯ ಪ್ರದಾನ ಮಂತ್ರಿ ನರೇಂದ್ರ ಮೋದಿ ಅಪರೇಷನ್ ಸಿಂಧೂರ ಮೂಲಕ ತಕ್ಕ ಉತ್ತರ ನೀಡಿದರು. ನಮ್ಮ ಸೈನಿಕರು ತಮ್ಮ ಕುಟುಂಬವನ್ನು ತೊರೆದು ದೇಶ ಸೇವೆಗೆ ತೆರಳಿ ನಮ್ಮನ್ನು ನೆಮ್ಮದಿಯಿಂದ ನಿದ್ರೆ ಮಾಡಲು ಅನುವು ಮಾಡಿಕೊಡುತ್ತಾರೆ. ಸೈನಿಕರ ತ್ಯಾಗ, ಬಲಿದಾನ, ಹೋರಾಟದ ಜೀವನದ ಬಗ್ಗೆ ಎಲ್ಲರಿಗೂ ಅರಿವು ಮೂಡಬೇಕು ಎಂದರು. ಗ್ರಾ.ಪಂ. ಅಧ್ಯಕ್ಷ ಕಾಳನ ರವಿ, ಪಿಡಿಒ ನಂದ, ಪಂಚಾಯತ್ ಸದಸ್ಯರು, ಸಿಬ್ಬಂದಿ ವರ್ಗ, ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಭಿಮಾನಿಗಳು ಹಾಜರಿದ್ದರು. ನಿವೃತ್ತ ಶಿಕ್ಷಕ ಶ್ರೀಧರ್ ಕಾರ್ಯಕ್ರಮ ನಿರ್ವಹಿಸಿದರು.

ಪುರುಷರ ಹಗ್ಗ ಜಗ್ಗಾಟದಲ್ಲಿ ಅಯ್ಯಂಗೇರಿ ಶ್ರೀಕೃಷ್ಣ ಯುವಕ ಸಂಘ ಪ್ರಥಮ ಸ್ಥಾನ, ಕಾರುಗುಂದ ಶ್ರೀ ಭಗವತಿ ಸಂಘ ದ್ವಿತೀಯ ಸ್ಥಾನ, ಮಹಿಳೆಯರ ಹಗ್ಗ ಜಗ್ಗಾಟದಲ್ಲಿ ಸಿಂಗತ್ತೂರಿನ ಮಹಾವಿಷ್ಣು ಯುವತಿ ಮಂಡಳಿ ಪ್ರಥಮ, ತಣ್ಣಿಮಾನಿ ಭಗವತಿ ಯುವತಿ ಮಂಡಳಿ ದ್ವಿತೀಯ ಸ್ಥಾನ ಪಡೆದುಕೊಂಡರು.

ಕಿರಿಯ ಪ್ರಾಥಮಿಕ ಶಾಲಾ ಮಕ್ಕಳ ಓಟದ ಸ್ಪರ್ಧೆ ಬಾಲಕರ ವಿಭಾಗದಲ್ಲಿ ಕೆ.ಬಿ. ಚÀಂದನ್, ಮೋನಿಶ್ ಮೊದಲ 2 ಸ್ಥಾನ ಗಳಿಸಿದರು. ಬಾಲಕಿಯರ ವಿಭಾಗದಲ್ಲಿ ಜಾಹ್ನವಿ ಪ್ರಥಮ, ಕೆ.ಆರ್ ರಕ್ಷಿತಾ ದ್ವಿತೀಯ ಸ್ಥಾನ ಗಳಿಸಿದರು. ಹಿರಿಯ ಪ್ರಾಥಮಿಕ ಶಾಲೆ ಬಾಲಕರ ಓಟದ ಸ್ಪರ್ಧೆಯಲ್ಲಿ ಚಿಂತನ್ ಪ್ರಥಮ, ಅಭಿನಂದನ್ ದ್ವಿತೀಯ, ಬಾಲಕಿಯರ ವಿಭಾಗದಲ್ಲಿ ಪ್ರಜ್ಞಾ ಬಿದ್ದಿಯಂಡ ಪ್ರಥಮ, ಸಾಕ್ಷಿ ಕಾವೇರಮ್ಮ ದ್ವಿತೀಯ ಬಹುಮಾನ ಪಡೆದುಕೊಂಡರು.

ಪ್ರೌಢಶಾಲೆ ಬಾಲಕರ ವಿಭಾಗದಲ್ಲಿ ನಿತೀಶ್ ನಂಜಪ್ಪ ಪ್ರಥಮ, ಎಸ್. ಸುದೀಶ್ ದ್ವಿತೀಯ, ಬಾಲಕಿಯರ ವಿಭಾಗದಲ್ಲಿ ಎನ್.ಎ. ಮೇಘನಾ ಪ್ರಥಮ, ಕೆ.ಐ.ನೀತು ದ್ವಿತೀಯ ಸ್ಥಾನ ಗಳಿಸಿದರು. ಕಾಲೇಜು ಹುಡುಗರ ವಿಭಾಗದಲ್ಲಿ ಬೊಪಣ್ಣ ಪ್ರಥಮ, ಶಭಾಹ ದ್ವಿತೀಯ ಸ್ಥಾನ ಪಡೆದುಕೊಂಡರು. ಸಾರ್ವಜನಿಕ ಪುರುಷರ ವಿಭಾಗದಲ್ಲಿ ಸೃಜನ್ ಪ್ರಥಮ, ದುಶ್ಯಂತ್ ದ್ವಿತೀಯ, ಮಹಿಳೆಯರ ವಿಭಾಗದಲ್ಲಿ ರೂಪ ಪ್ರಥಮ, ರಜನಿ ದ್ವಿತೀಯ, 60 ವರ್ಷ ಮೇಲ್ಪಟ್ಟ ಪುರುಷರ ವಿಭಾಗದಲ್ಲಿ ಅಶೋಕ್ ಪ್ರಥಮ, ಉದಿಯನ ಲವ ದ್ವಿತೀಯ, ಮಹಿಳಾ ವಿಭಾಗದಲ್ಲಿ ಅನುಸೂಯ ಪ್ರಥಮ ಸ್ಥಾನ ಗಳಿಸಿದರು.

ಮಳೆಯ ನಡುವೆ ಕ್ರೀಡಾಭಿಮಾನಿಗಳು ಚಪ್ಪಾಳೆ, ಸಿಳ್ಳೆಯ ಶಬ್ದದ ಪ್ರೋತ್ಸಾಹದ ಜತೆಗೆ ಕ್ರೀಡಾಕೂಟದ ಸಂಭ್ರಮ ಮನೆ ಮಾಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net