

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಸರ್ಕಾರಿ ನೌಕರರ ಹಲವು ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತಂದು ನೌಕರರ ಆಶೋತ್ತರಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಬೆಂಗಳೂರು ಪದವೀಧರರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ರಾಮೋಜಿ ಗೌಡ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದ ಸಹಯೋಗದಲ್ಲಿ ಹೊಸಕೋಟೆಯ ಚನ್ನಭೈರೇಗೌಡ ತಾಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ 2023-24 ನೇ ಸಾಲಿನ ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಆಗುವುದಕ್ಕೂ ಮುನ್ನ ಸರ್ಕಾರಿ ನೌಕರನಾಗಿ ಕಾರ್ಯ ನಿರ್ವಹಿಸಿ, ನೌಕರರ ಸಂಘದ ಸದಸ್ಯನಾಗಿ ಹಲವು ಕ್ರೀಡಾಕೂಟಗಳಲ್ಲಿ ಭಾಗವಹಿಸಿದ್ದೇನೆ. ನೌಕರರ ವಿವಿಧ ಬೇಡಿಕೆಗಳಾದ 7ನೇ ವೇತನ ಆಯೋಗ, ರಾಷ್ಟ್ರೀಯ ಪಿಂಚಣಿ ಯೋಜನೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೌಕರರಿಗೆ ನಗರ ಎಚ್‌ಆರ್ ಭತ್ಯೆ ಸೇರಿ ವಿವಿಧ ಬೇಡಿಕೆಗಳ ಬಗ್ಗೆ ಸರ್ಕಾರದ ಗಮನಕ್ಕೆ ತಂದು ನಿಮ್ಮ ಪರವಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಮನೆ ನಿರ್ಮಾಣಕ್ಕೆ ಕ್ರಮ: ವಿಧಾನ ಪರಿಷತ್ ಚುನಾವಣೆ ಸಂದರ್ಭದಲ್ಲಿ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಜಿಲ್ಲೆಯ ನಿರುದ್ಯೋಗ ಯುವಕ ಯುವತಿಯರಿಗೆ ಉದ್ಯೋಗ ಕೊಡಿಸುವ ಭರವಸೆ ನೀಡಿದ್ದೆ, ಜಿಲ್ಲೆಯ ನಿರುದ್ಯೋಗಿಗಳು ನಮ್ಮ ಕಚೇರಿಗೆ ಬಂದು ಉದ್ಯೋಗದ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು. ಎರಡನೇಯದಾಗಿ ಸರ್ಕಾರಿ ನೌಕರರನ್ನು ಒಳಗೊಂಡ ಗೃಹ ನಿರ್ಮಾಣ ಸಂಘ ರಚಿಸಿ ವಸತಿ ಯೋಜನೆಯಡಿ ಮನೆ ನಿರ್ಮಿಸಿ ಕೊಡಲಾಗುವುದು ಎಂದು ರಾಮೋಜಿಗೌಡ ಹೇಳಿದರು.