

ಮುಂಡರಗಿ: ಪಟ್ಟಣದ ಹೊರವಲಯದ ಗೋದಾಮವೊಂದರಲ್ಲಿ ಸಂಗ್ರಹಿಸಿದ್ದ ಅಂಗನವಾಡಿ ಮಕ್ಕಳು ಹಾಗೂ ಗರ್ಭಿಣಿಯರಿಗೆ ವಿತರಿಸಬೇಕಾಗಿದ್ದ ಅಪಾರ ಪ್ರಮಾಣದ ಅಕ್ಕಿ ಹುಳುಬಿದ್ದು ಹಾಳಾಗಿದೆ.
ಗೋದಾಮಿನಲ್ಲಿರುವ ಅಕ್ಕಿಯು ಹಲವು ತಿಂಗಳಿನಿಂದ ಸಂಗ್ರಹಗೊಂಡಿದ್ದರಿಂದಾಗಿ ಅಕ್ಕಿಯನ್ನು ಹುಳುಗಳು ತಿಂದು ನಾಶಪಡಿಸಿದ್ದು, ದುರ್ವಾಸನೆ ಬೀರುತ್ತಿದೆ. ಇಷ್ಟೊಂದು ಪ್ರಮಾಣದ ಅಕ್ಕಿ ಸಂಗ್ರಹವಾಗಿದ್ದಾರೂ ಹೇಗೆ?. ಎಂಬುದು ಚರ್ಚೆಗೆ ಗ್ರಾಸವಾಗಿದೆ.
ತಹಸೀಲ್ದಾರ್ ಧನಂಜಯ ಎಂ., ಸಿಡಿಪಿಒ ಮಹಾದೇವ ಇಸರನಾಳ ಬುಧವಾರ ಗೋದಾಮಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇದನ್ನು ಯಾವ ಕಾರಣಕ್ಕಾಗಿ ಸಂಗ್ರಹಿಸಲಾಗಿದೆ ಎಂಬುದು ತಿಳಿಯಬೇಕಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ತಹಸೀಲ್ದಾರ್ ಧನಂಜಯ ಎಂ. ಅವರು, ಸಂಗ್ರಹಿಸಿದ್ದ ಅಕ್ಕಿಯನ್ನು ಹುಳುಗಳು ತಿಂದು, ದುರ್ವಾಸನೆ ಬೀರುತ್ತಿತ್ತು. ಈ ಬಗ್ಗೆ ಮಾಹಿತಿ ಬಂದ ತಕ್ಷಣ ಪರಿಶೀಲಿಸಿದ್ದೇವೆ. ಸಿಡಿಪಿಒ ಹಾಗೂ ಎಂಎಸ್‌ಪಿಸಿ ಸಂಸ್ಥೆಯವರನ್ನು ಕರೆಯಿಸಿ ಚರ್ಚಿಸಿದ್ದೇನೆ. ಈ ಅಕ್ಕಿಯನ್ನು ಯಾವುದೇ ಕಾರಣಕ್ಕೂ ಅಂಗನವಾಡಿ ಮಕ್ಕಳಿಗೆ ಹಾಗೂ ಗರ್ಭಿಣಿಯರಿಗೆ ವಿತರಿಸದಂತೆ ಸೂಚಿಸಿದ್ದೇನೆ. ಹಾಗೆಯೇ ಸಂಪೂರ್ಣ ವರದಿ ಸಲ್ಲಿಸಬೇಕು ಎಂದು ತಿಳಿಸಲಾಗಿದೆ. ಈ ಬಗ್ಗೆ ಸೂಕ್ತ ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.
ಸಿಡಿಪಿಒ ಮಹಾದೇವ ಇಸರನಾಳ ಅವರು ಪ್ರತಿಕ್ರಿಯಿಸಿ, ಎಂಎಸ್‌ಪಿಸಿ ಸಂಸ್ಥೆಯವರು ಉಪಯೋಗಕ್ಕೆ ಬಾರದ್ದು ಮತ್ತು ಹೆಚ್ಚುವರಿಯಾಗಿರುವ ಅಕ್ಕಿ ತಂದು ಸಂಗ್ರಹಿಸಿದ್ದರು. ಈ ಬಗ್ಗೆ ನಮ್ಮ ಗಮನಕ್ಕೂ ತಂದಿಲ್ಲ. ಅದು ಈಗ ಹಾನಿಯಾಗಿದೆ. ಅಕ್ಕಿ ಹಾನಿಯಾಗಿದ್ದರಿಂದ ಸರ್ಕಾರಕ್ಕೆ ಆಗುವ ಲಾಸ್ ಅನ್ನು ಎಂಎಸ್‌ಪಿಸಿ ಸಂಸ್ಥೆಯವರಿಂದಲೇ ಭರಿಸಲು ಶಿಸ್ತು ಕ್ರಮಕ್ಕೆ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗುತ್ತದೆ ಎಂದರು.