ಅಧ್ಯಾತ್ಮದಿಂದ ಶಾಂತಿ ನೆಲೆಸಲು ಸಾಧ್ಯ

dvd gabbur jatre
ದೇವದುರ್ಗ ತಾಲೂಕು ಗಬ್ಬೂರಿನಲ್ಲಿ ಶ್ರೀ ಬೂದಿಬಸವೇಶ್ವರ ಜಾತ್ರೆ ನಿಮಿತ್ತ ಆಯೋಜಿಸಿದ್ದ ಧಾರ್ಮಿಕ ಸಭೆ ಹಾಗೂ ನಗೆ ಕಲರವ ಕಾರ್ಯಕ್ರಮವನ್ನು ಬೂದಿಬಸವ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು. ಹಾಲ್ವಿ ಮಠದ ಅಭಿನವ ಮಹಾಂತ ಸ್ವಾಮೀಜಿ, ಕರೆಗುಡ್ಡದ ಮಹಾಂತಲಿಂಗ ಸ್ವಾಮೀಜಿ, ಕನಕಗಿರಿ ಸುವರ್ಣಗಿರಿಮಠದ ಚನ್ನಮಲ್ಲ ಸ್ವಾಮೀಜಿ ಇದ್ದರು.
Published on

ದೇವದುರ್ಗ: ಸಾವಿರಾರು ವರ್ಷಗಳ ಹಿಂದೆ ಜಗತ್ತು ಅಂಧಕಾರದಲ್ಲಿ ಮುಳುಗಿದ್ದಾಗ ನಮ್ಮ ದೇಶದಲ್ಲಿ ದಾಸರು, ಶರಣರು, ಸಂತರು ಅಧ್ಯಾತ್ಮದ ಬೆಳಕು ನೀಡಿದ್ದರು. ಆಧ್ಯಾತ್ಮಿಕತೆಯಲ್ಲಿ ಭಾರತ ವಿಶ್ವಗುರುವಾಗಿದೆ ಎಂದು ವಿಜಯಪುರದ ಉಪನ್ಯಾಸಕ ಅಶೋಕ ಹಂಚಳ್ಳಿ ಹೇಳಿದರು.

ಗಬ್ಬೂರು ಗ್ರಾಮದಲ್ಲಿ ಶ್ರೀ ಬೂದಿಬಸವೇಶ್ವರ ಜಾತ್ರೆ ನಿಮಿತ್ತ ಶನಿವಾರ ಸಂಜೆ ಏರ್ಪಡಿಸಿದ್ದ ಧಾರ್ಮಿಕ ಸಭೆಯಲ್ಲಿ ವಿಶೇಷ ಉಪನ್ಯಾಸ ನೀಡಿದರು. ಅಧ್ಯಾತ್ಮದಿಂದ ಜಗತ್ತಿನಲ್ಲಿ ಶಾಂತಿ ನೆಲೆಸಲು ಸಾಧ್ಯವಿದೆ. ಮಾನವೀಯ ಮೌಲ್ಯಗಳು, ಗುರುಹಿರಿಯರ ಬಗ್ಗೆ ಗೌರವ, ಭಕ್ತಿಭಾವ ಕುಸಿಯುತ್ತಿರುವ ಇಂಥ ಸಂದರ್ಭದಲ್ಲಿ ಅಧ್ಯಾತ್ಮ ಕಾರ್ಯಕ್ರಮ ಜಗತ್ತಿಗೆ ಔಷಧ ಇದ್ದಂತೆ. ಗಬ್ಬೂರಿನ ಶ್ರೀಮಠ ಸಮಾಜ ಸೇವೆ ಮಾತ್ರವಲ್ಲ ಭಕ್ತಿಯನ್ನು ಜನರನ್ನು ಬಿತ್ತುತ್ತಿದೆ. ಇಂಥ ಮಠಗಳ ಕಾರ್ಯ ಇನ್ನೂ ಹೆಚ್ಚಾಗಬೇಕು ಎಂದರು.

ಹಾಲ್ವಿ ಮಠದ ಅಭಿನವ ಮಹಾಂತ ಸ್ವಾಮೀಜಿ, ಕರೆಗುಡ್ಡದ ಮಹಾಂತಲಿಂಗ ಸ್ವಾಮೀಜಿ, ಕನಕಗಿರಿ ಸುವರ್ಣಗಿರಿಮಠದ ಚನ್ನಮಲ್ಲ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಶ್ರೀಬೂದಿಬಸವ ಶಿವಾಚಾರ್ಯರು ಅಧ್ಯಕ್ಷತೆವಹಿಸಿದ್ದರು. ಸುಲ್ತಾನಪುರದ ಶಂಭು ಸೋಮನಾಥ ಶಿವಾಚಾರ್ಯರು ಇತರರಿದ್ದರು.

ನಗೆಗಡಲಲ್ಲಿ ತೇಲಿದ ಜನರು: ಗಬ್ಬೂರು ಬೂದಿಬಸವೇಶ್ವರ ಜಾತ್ರೆ ನಿಮಿತ್ತ ಆಯೋಜಿಸಿದ್ದ ನಗೆ ಕಲರವ 2025 ಕಾರ್ಯಕ್ರಮ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿತು. ಹಾಸ್ಯ ಕಲಾವಿದ ಮಹಾದೇವ ಸತ್ತಿಗೆರಿ, ಸಾಂಸಾರಿಕ ಹಾಗೂ ಕೌಟುಂಬಿಕ ಹಾಸ್ಯ ಸನ್ನಿವೇಶಗಳನ್ನು ಹೇಳಿ ಭಕ್ತರನ್ನು ನಗಿಸಿದರು. ಟ್ರಾಫಿಕ್ ಪೊಲೀಸರ ಕರ್ತವ್ಯ, ವಿವಿಧ ಹಿರಿಯ ಕಲಾವಿದರ ಧ್ವನಿ, ಹಳೇ ಹಾಡುಗಳು ಹಾಗೂ ಡಿಜೆ ಹಾಡುಗಳ ಬಗ್ಗೆ ಹಾಸ್ಯ ಮಾಡಿ ಜನರನ್ನು ನಗಿಸಿದರು. ಮಹಿಳೆಯರ ಶಕ್ತಿ ಹಾಗೂ ಪುರುಷರ ದೌರ್ಬಲ್ಯ, ಸರಳತೆ ಬಗ್ಗೆ ಮಾತನಾಡಿ ಮನರಂಜಿಸಿದರು.

ಕಲಾವಿದ ಮಹಾಂತೇಶ ಹಡಪದ, ವಿವಿಧ ಪ್ರಾಣಿ ಪಕ್ಷಿಗಳು, ಕಲಾವಿದರ ಧ್ವನಿ, ಹಾಡುಗಳ ಬಗ್ಗೆ ಮಿಮಿಕ್ರಿ ಮಾಡಿದರು. ಕುಳ್ಳರ ಜೀವನ ಹಾಗೂ ಹಾಸ್ಯ ಪ್ರಸಂಗ ಬಗ್ಗೆ ಹೇಳಿ ಜನರನ್ನು ರಂಜಿಸಿದರು. ಜಾದೂಗಾರ ಸಂಜು ಇರಕಲ್ ವಿವಿಧ ಪವಾಡ ಮಾಡಿ ಭಕ್ತರು ನಿಬ್ಬೆರಗಾಗುವಂತೆ ಮಾಡಿದರು. ರಾಯಚೂರಿನ ಮೋನಿಕಾ ಡ್ಯಾನ್ಸ್ ಅಕಾಡೆಮಿ ಸದಸ್ಯರು ವಿವಿಧ ನೃತ್ಯ, ಸಾಹಸಮಯ ಡ್ಯಾನ್ಸ್ ಮಾಡಿ ಗಮನ ಸೆಳೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net