ನಮ್ಮನ್ನು ನಾವು ಅರಿಯುವ ಅಳತೆಗೋಲು ಅಧ್ಯಾತ್ಮ

HNL ADYATMA
Published on

ಹಾನಗಲ್ಲ: ಮನಸು, ಬುದ್ಧಿ, ವಿವೇಕಗಳ ಮೂಲಕ ಪರಮಾನಂದದತ್ತ ಸಾಗಲು ಮನೋವಿಕಾರಗಳನ್ನು ತೊಡೆದು ಸತ್ಸಂಗ ಹಾಗೂ ಉತ್ತಮ ಸಾಹಿತ್ಯದ ಪ್ರೇರಣೆ ಪಡೆಯಬೇಕು ಎಂದು ಸಾಹಿತಿ ಮಾರುತಿ ಶಿಡ್ಲಾಪೂರ ಅಭಿಪ್ರಾಯಪಟ್ಟರು.

ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ ಆಯೋಜಿಸಿದ್ದ ಪಂ.ಸೀತಾರಾಮಶಾಸ್ತ್ರಿ ಗಿರಿಶಾಸ್ತ್ರಿ ಕಾಶೀಕರ ಅವರ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಅಧ್ಯಾತ್ಮದ ನೆಲೆಯಲ್ಲಿ ನಾಡು ನುಡಿ ರಕ್ಷಣೆ’ ಕುರಿತು ಅವರು ಮಾತನಾಡಿದರು.

ನಮ್ಮ ಸಾಂಸ್ಕೃತಿಕ ಪರಂಪರೆ ಅಂತಮುಖಿ ಅನುಭಾವವನ್ನು ಹೊಂದಿರುವಂತಹದ್ದು. ಸಾಹಿತ್ಯ ಹಾಗೂ ಸಾಂಸ್ಕೃತಿಕ ವಿಚಾರಗಳ ಮೂಲಕ ನಮ್ಮ ಸಂಕಷ್ಟಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ. ಅಂಧಕಾರ ಅಳಿಸಿ ಸುಶೀಲ ಚಿತ್ತದಿಂದ ಉತ್ತಮ ಆಲೋಚನೆಗೆ ಮುಂದಾದರೆ ಅದುವೇ ಬದುಕಿನ ಯಶಸ್ಸು. ಅಧ್ಯಾತ್ಮ ನಮ್ಮನ್ನು ನಾವು ಅರಿಯುವ ಅಳತೆಗೋಲು. ಪ್ರಕೃತಿಯೊಡನೆ ಬಾಳಿ ಬೆಳಗುವ ನಮ್ಮ ಬದುಕಿಗೆ ಎಲ್ಲರೊಡನೊಂದಾಗಿ ಜೀವಿಸುವ ಮನೋಸ್ಥಿತಿ ಬೇಕು. ಸಾವಿನ ಭಯ, ಸೋಲಿನ ನಿರಾಸೆಗಳನ್ನು ಗೆಲ್ಲುವುದೇ ನಿಜವಾದ ಅಧ್ಯಾತ್ಮ. ನಮ್ಮಲ್ಲಿನ ಅಂಧಕಾರ ಅಳಿಸಿ ಬಾಳಿನ ಬೆಳಕು ಅರಿಯಬೇಕು. ಇದಕ್ಕೆಲ್ಲ ಸರಿಯಾದ ಗುರು ಬೇಕು. ಇನ್ನೊಂದೆಡೆ ಪರಮಾತ್ಮನನ್ನು ಅರಿಯುವ ಒಂದು ಆಸ್ತಿಕತೆ. ನಮ್ಮ ಒಳಗಣ್ಣಿಗೆ ಕಾಣುವ ಸತ್ಯ. ಸಮರಸ ಸೂತ್ರವೇ ಅಧ್ಯಾತ್ಮ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ಗುರುನಾಥ ಗವಾಣಿಕರ, ಯಾಂತ್ರಿಕ ಜೀವನ ವಿಧಾನಕ್ಕೆ ಜೋತು ಬಿದ್ದು ನಮ್ಮ ಸಂಸ್ಕೃತಿ ಸಂಸ್ಕಾರಗಳೇ ದೂರವಾಗುತ್ತಿವೆ. ಬದುಕಿನ ಅರ್ಥವನ್ನು ನಮ್ಮ ಸಾತ್ವಿಕ ನಡೆ-ನುಡಿಗಳಲ್ಲಿ ಕಾಣಬೇಕಾಗಿದೆ. ಇದಕ್ಕಾಗಿ ನಿತ್ಯ ಸಾಹಿತ್ಯ ಸಾಂಸ್ಕೃತಿಕ ಕಾರ್ಯಗಳು ನಡೆಯಬೇಕು. ಸಂಘ-ಸಂಸ್ಥೆಗಳು ಸಾಂಸ್ಕೃತಿಕ ವಾತಾವರಣಕ್ಕೆ ಬೆಂಬಲವಾಗಬೇಕು ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಷಣ್ಮುಖಪ್ಪ ಮುಚ್ಚಂಡಿ, ಒಳ್ಳೆಯವರ ಸ್ಮರಣೆ ಆಗಬೇಕು. ನಮ್ಮ ಮನಸು ವಿಕಾರದಿಂದ ಹೊರಬಂದು ಸಾಕಾರ ಬದುಕಿಗೆ ಹೆಜ್ಜೆ ಹಾಕಬೇಕು ಎಂದರು.

ದತ್ತಿ ದಾನಿಗಳಾದ ಪಾರ್ವತಿಬಾಯಿ ಕಾಶೀಕರ, ಪುರಸಭೆ ಅಧ್ಯಕ್ಷೆ ರಾಧಿಕಾ ದೇಶಪಾಂಡೆ, ಉಪಾಧ್ಯಕ್ಷೆ ವೀಣಾ ಗುಡಿ ಅತಿಥಿಗಳಾಗಿ ಮಾತನಾಡಿದರು. ದಮಯಂತಿ ದೇಶಪಾಂಡೆ ಸಂಗಡಿಗರು ಪ್ರಾರ್ಥಿಸಿದರು. ಪರಿಷತ್ ಕಾರ್ಯದರ್ಶಿ ನಾಗರಾಜ ಸಿಂಗಾಪೂರ, ನಗರ ಘಟಕದ ಕಾರ್ಯದರ್ಶಿ ಎಸ್.ವಿ. ಹೊಸಮನಿ ಹಾಗೂ ಎಂ.ಎಸ್. ಅಮರದ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net