

ಜಮಖಂಡಿ: ಅಧ್ಯಾತ್ಮದಿಂದ ಮಾನಸಿಕ ನೆಮ್ಮದಿ ದೊರಕುತ್ತದೆ. ಸುಖಮಯ ಜೀವನಕ್ಕೆ ಅಧ್ಯಾತ್ಮ ಅತ್ಯವಶ್ಯವಾಗಿದೆ. ನಿತ್ಯಜೀವನದ ಜಂಜಾಟ ದಿಂದ ಹೊರಬಂದು ಕೆಲ ಸಮಯ ಅಧ್ಯಾತ್ಮದತ್ತ ಒಲವು ತೋರಬೇಕು ಎಂದು ಸೌರಭ ದಾಸ ಸಾಹಿತ್ಯ ವಿದ್ಯಾಲಯದ ಸಂಚಾಲಕ ಪಂ.ಪ್ರಮೋದಾಚಾರ್ಯ ಪೂಜಾರ ತಿಳಿಸಿದರು.
ನಗರದ ಭಾನುವಾರ ದ್ವಾರಕಾನಾಥ ದೇವಸ್ಥಾನದಲ್ಲಿ ಏರ್ಪಡಿಸಿದ್ದ ಪ್ರಮಾಣಪತ್ರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾಲಯವು ಹರಿದಾಸರ ಹಾಗೂ ಅವರ ಕೃತಿಗಳ ಪರಿಚಯ ಮತ್ತು ಸಮಾಜದಲ್ಲಿ ಧಾರ್ಮಿಕ ಮನೋಭಾವನೆ ತುಂಬುವ ಕೆಲಸ ಮಾಡುತ್ತಿದೆ. ದೇಶ, ವಿದೇಶಗಳ ಅನೇಕ ಜನ ಆಸ್ತಿಕರು ದಾಸ ಸಾಹಿತ್ಯದ ಪರೀಕ್ಷೆಗಳಲ್ಲಿ ಭಾಗವಹಿಸುತ್ತಿರುವುದು ಸಂತಸದ ಸಂಗತಿ. ಯಾವುದೇ ಭೇದವಿಲ್ಲದೇ ಸ್ತ್ರೀ, ಪುರುಷರು ದಾಸ ಸಾಹಿತ್ಯದ ಅಧ್ಯಯನ ಮಾಡಬಹುದು ಎಂದರು.
ಪ್ರತಿ ವರ್ಷ ಅಂದಾಜು 30 ರಿಂದ 40 ಸಾವಿರ ಜನ ಪರೀಕ್ಷೆಗೆ ಕುಳಿತು ದಾಸ ಸಾಹಿತ್ಯದ ಜ್ಞಾನ ಪಡೆದುಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಪಂ. ರಂಗಾಚಾರ್ಯ ಜೋಶಿ ಮಾತನಾಡಿ, ಸನಾತನ ಧರ್ಮದ ಅತ್ಯಮೂಲ್ಯ ಗ್ರಂಥಗಳಾದ ರಾಮಾಯಣ, ಮಹಾಭಾರತ, ಭಾಗವತ, ವೇದಗಳು, ಉಪನಿಷತ್ತುಗಳ ಸಾರವನ್ನು ಹರಿದಾಸರು ತಮ್ಮ ಕೃತಿಗಳಲ್ಲಿ ಜನ ಸಾಮಾನ್ಯರಿಗೆ ಅರ್ಥವಾಗುವಂತೆ ತಿಳಿಸಿಕೊಟ್ಟಿದ್ದಾರೆ. ಅವುಗಳ ಅಧ್ಯಯನ, ಪಾರಾಯಣದಿಂದ ಧಾರ್ಮಿಕತೆ ಬೆಳೆದು, ನೆಮ್ಮದಿಗೂ ಕಾರಣವಾಗುತ್ತದೆ. ಅದಕ್ಕಾಗಿಯೇ ಸೌರಭ ದಾಸ ಸಾಹಿತ್ಯವಿದ್ಯಾಲಯ ಉತ್ತರಾಧಿ ಮಠಾಧೀಶ ಸತ್ಯಾತ್ಮತೀರ್ಥ ಶ್ರೀಪಾದರು ಸ್ಥಾಪಿಸಿದ್ದಾರೆ. ಕಳೆದ 9 ವರ್ಷಗಳಿಂದ ಧರ್ಮ ಜಾಗೃತಿಯ ಕೆಲಸ ನಡೆದಿದೆ ಎಂದು ಹೇಳಿದರು.
ಉಡುಪಿಯ ಅಷ್ಟಮಠಾಧೀಶರು ಸೇರಿ ಮಾಧ್ವ ಮಠದ ಯತಿಗಳು ವಿದ್ಯಾಲಯದ ಕಾರ್ಯ ಶ್ಲಾಸಿದ್ದಾರೆ. ಉತ್ತೇಜನ ಪ್ರೊತ್ಸಾಹ ನೀಡುತ್ತಿದ್ದಾರೆ ಎಂದು ಹೇಳಿದರು.
ಸುಜಯೀಂದ್ರಾಚಾರ್ಯ ಮನಗೂಳಿ ಮಾತನಾಡಿದರು. ಸನ್ಮಾನ- ಅಲಕನಂದಾ ಗೋ. ಹುಲ್ಯಾಲಕರ, ವಾದಿರಾಜ ಕುಲಕರ್ಣಿ, ಶಕುತಾಯಿ ಗಲಗಲಿ, ಶ್ರೀದೇವಿ ಕುಲಕರ್ಣಿ, ರಮಾವೈದ್ಯ ಅವರನ್ನು ಸನ್ಮಾನಿಸಲಾಯಿತು. ಸೌಮ್ಯಾ ನಾಮಣ್ಣವರ, ಲಕ್ಷ್ಮೀ ಕುಲಕರ್ಣಿ ಗಮಕ ಕಾವ್ಯವಾಚನ ಮಾಡಿದರು. ಹುನ್ನೂರಿನ ಬಾಲಕಿಯರು ನೃತ್ಯ ಪ್ರದರ್ಶನ ಮಾಡಿದರು. ಪ್ರಸನ್ನವೆಂಕಟದಾಸರ ಕುರಿತು ಕಿರು ರೂಪಕವನ್ನು ಪ್ರದರ್ಶಿಸಲಾಯಿತು. ದೇವಸ್ಥಾನದ ಅರ್ಚಕ ಅಚ್ಯುತರಾವ ಬಿಚಗತ್ತಿ, ರಾಜೇಂದ್ರ ಹುಲ್ಯಾಳಕರ ವೇದಿಕೆಯಲ್ಲಿದ್ದರು. ಪಲ್ಲವಿ ಕುಲಕರ್ಣಿ ಸ್ವಾಗತಿಸಿದರು. ಕವಿತಾ ಕಪಿಲೇಶ್ವರ ನಿರೂಪಿಸಿದರು. ರಾಜಶ್ರೀ ಹುಲ್ಯಾಳಕರ ವಂದಿಸಿದರು.