

ಹುಬ್ಬಳ್ಳಿ: ಭಾರತೀಯ ಪರಂಪರೆ, ಸಂಸ್ಕೃತಿ ವಿಶ್ವದೆಲ್ಲೆಡೆ ಹರಡುತ್ತಿದೆ. ಬಹಳಷ್ಟು ರಾಷ್ಟ್ರಗಳು ಆಧ್ಯಾತ್ಮ ಮತ್ತು ವಿಜ್ಞಾನವನ್ನು ಒಂದೇ ನಾಣ್ಯದ ಎರಡು ಮುಖಗಳು ಎನ್ನುತ್ತಿವೆ. ಇಂಥ ಶ್ರೇಷ್ಠ ಪರಂಪರೆ ಹೊಂದಿದ ನಾವೇ ಧನ್ಯರು ಎಂದು ಖ್ಯಾತ ಮನೋರೋಗ ತಜ್ಞ ಡಾ. ಆನಂದ ಪಾಂಡುರಂಗಿ ಹೇಳಿದರು.
ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಧನ್ಯೋಸ್ಮಿ ಯೋಗ ಕೇಂದ್ರದ ವಾರ್ಷಿಕೋತ್ಸವ ಹಾಗೂ ಪ್ರಥಮ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಿರಂತರ ಯೋಗಾಭ್ಯಾಸ ಮಾಡುವುದರಿಂದ ನಮ್ಮಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಸುತ್ತದೆ. ಮನೋದೈಹಿಕ ಆರೋಗ್ಯಕ್ಕೆ ಯೋಗ ಸಹಕಾರಿ ಎಂದರು.
ಡಾ. ಎ.ಸಿ. ವಾಲಿ ಮಹಾರಾಜ ಸಾನ್ನಿಧ್ಯ ವಹಿಸಿ ಮಾತನಾಡಿ, ಯೋಗದ ಜತೆಗೆ ಕಲಿತ ಸಂಸ್ಕಾರ, ಸಂಸ್ಕೃತಿ, ಪರಂಪರೆಯನ್ನು ಜಗತ್ತಿನಾದ್ಯಂತ ಪಸರಿಸುವ ಕಾರ್ಯ ಮಾಡಬೇಕು ಎಂದರು.
ಯೋಗಗುರು ಬಿ. ರಾಘವೇಂದ್ರ ಶೆಣೈ ಮಾತನಾಡಿ, ವಿನಾಯಕ ತಲಗೇರಿ ಅವರು ಈ ಭಾಗದಲ್ಲಿ ನಿರಂತರ ಯೋಗ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಎಂದರು.
ಧನ್ಯೋಸ್ಮಿ ಯೋಗ ಕೇಂದ್ರದ ಸಂಸ್ಥಾಪಕ, ಯೋಗಗುರು ವಿನಾಯಕ ತಲಗೇರಿ ಮಾತನಾಡಿದರು. 3 ತಿಂಗಳ ತರಬೇತಿ ಪಡೆದ 29 ಯೋಗ ಶಿಕ್ಷಕರಿಗೆ ಇಂಟರ್ನ್ಯಾಷನಲ್ ಯೋಗ ಆರ್ಗನೈಜೇಶನ್ನ ಪ್ರಮಾಣಪತ್ರ ನೀಡಲಾಯಿತು. ಸುಭಾಷಸಿಂಗ್ ಜಮಾದಾರ, ಉದ್ಯಮಿ ದೀಪಾ ನಾಯಕ, ಬಂಟರ ಸಂಘದ ಕಾರ್ಯದರ್ಶಿ ಸತೀಶ ಶೆಟ್ಟಿ ಉಪಸ್ಥಿತರಿದ್ದರು.
ಡಾ. ಸರ್ವಮಂಗಳ ಆಚಾರ್ಯ ನಿರೂಪಿಸಿದರು. ಪ್ರೇಮಾನಂದ ಶೆಟ್ಟಿ ವಂದಿಸಿದರು. ಪ್ರತೀಕ್ಷಾ ಶೆಟ್ಟಿ ಪ್ರಾರ್ಥಿಸಿದರು. ಡಾ. ನಾಗಲಿಂಗ ಮುರಗಿ ತಬಲಾ ಸಾಥ್ ನೀಡಿದರು.