ಸಂಯೋಜಿತ ಶಕ್ತಿಗಳಿಂದ ಆಧ್ಯಾತ್ಮಿಕ ಕಂಪನ

h6-Seva Sadan
Published on

ಹುಬ್ಬಳ್ಳಿ: ಅಧಿಕ ಮಾಸ ನಿಮಿತ್ತ ಇಲ್ಲಿನ ಸೇವಾಭಾರತಿ ಟ್ರಸ್ಟ್​ನ ಮಾತೃಛಾಯಾ ಬಾಲಕಲ್ಯಾಣ ಕೇಂದ್ರದಲ್ಲಿ 33 ದಂಪತಿಗಳಿಂದ ಲೋಕಕಲ್ಯಾಣಾರ್ಥವಾಗಿ ಹಾಗೂ ಬಾಲಕಲ್ಯಾಣ ಕೇಂದ್ರದ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಭಾನುವಾರ ಸತ್ಯನಾರಾಯಾಣ ಪೂಜೆ ಏರ್ಪಡಿಸಲಾಗಿತ್ತು.

ಕೇಂದ್ರದ ಅಧ್ಯಕ್ಷೆ ಕಮಲಾ ಜೋಶಿ ಮಾತನಾಡಿ, ಅಧಿಕ ಮಾಸವನ್ನು ಹಿಂದು ಧರ್ಮದಲ್ಲಿ ಪುರುಷೋತ್ತಮ ಮಾಸ ಮತ್ತು ಮಲಮಾಸ ಎಂದೂ ಕರೆಯಲಾಗುತ್ತದೆ. ಈ ಮಾಸಕ್ಕೆ ಹಿಂದು ಧರ್ಮದಲ್ಲಿ ಅಪಾರ ಮಹತ್ವ ನೀಡಲಾಗಿದೆ. ಈ ಅವಧಿಯಲ್ಲಿ, ಭಕ್ತರು ಆಧ್ಯಾತ್ಮಿಕ ಮತ್ತು ಧಾರ್ವಿುಕ ಚಟುವಟಿಕೆಗಳಲ್ಲಿ ತೊಡಗುತ್ತಾರೆ. ಭಗವಾನ್ ವಿಷ್ಣುವನ್ನು ಆರಾಧಿಸುತ್ತಾರೆ. ವಿಷ್ಣುವು ಅಧಿಕ ಮಾಸದ ಅಧಿಪತಿ ಎನ್ನುವ ನಂಬಿಕೆಯಿದೆ. ಈ ಬಾರಿ ಅಧಿಕ ಮಾಸದಲ್ಲಿ ಭಕ್ತರಿಗೆ ಶಿವ ಮತ್ತು ವಿಷ್ಣುವಿನ ಆರಾಧನೆಗೆ ಉತ್ತಮ ಅವಕಾಶ ದೊರೆಯಲಿದೆ. ಶ್ರಾವಣ ಮಾಸ ಮತ್ತು ಅಧಿಕ ಮಾಸದ ಸಂಯೋಜಿತ ಶಕ್ತಿಗಳು ಹೆಚ್ಚು ಆಧ್ಯಾತ್ಮಿಕ ಕಂಪನಗಳನ್ನು ಸೃಷ್ಟಿಸುತ್ತವೆ ಎಂದರು.

33 ದಂಪತಿಗಳಿಂದ ಸತ್ಯನಾರಾಯಣ ಪೂಜೆ, ಸುಮಂಗಲಿಯರಿಗೆ 33 ಮಂಗಳ ದ್ರವ್ಯಗಳೊಂದಿಗೆ ಬಾಗಿನ ದಾನ ಮಾಡಲಾಯಿತು. ನಂತರ ಅನ್ನಸಂತರ್ಪಣೆ ಜರುಗಿತು.

ಕೇಂದ್ರದ ರತ್ನಮಾತಾಜಿ, ಪ್ರಮುಖರಾದ ಭಾರತಿ ನಂದಕುಮಾರ, ಮಂಜುಳಾ ಕೃಷ್ಣನ್, ವೀಣಾ ಮಳಿಯೆ, ನಂದಾ ಸವಡಿ, ಡಾ. ರಘು ಅಕ್ಮಂಚಿ, ಗೋವಿಂದ ಜೋಶಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net