

ಗದಗ: ಪ್ರತಿಯೊಬ್ಬರಿಗೂ ಆಧ್ಯಾತ್ಮಿಕ ಚಿಂತನೆ ಅಗತ್ಯವಿದೆ ಎಂದು ಶ್ರೀ ಕಾಶೀ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.
ನಗರದ ಕೆ.ಎಚ್. ಪಾಟೀಲ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಆಷಾಢ ಮಾಸದ ಆಧ್ಯಾತ್ಮಿಕ ಆಶೀರ್ವಚನದ ರಜತ ಮಹೋತ್ಸವ ಹಾಗೂ ಶ್ರೀ ಸನ್ನಿಧಿಯವರ ಜನ್ಮದಿನದ ಅಮೃತ ಮಹೋತ್ಸವವನ್ನು ಭಾನುವಾರ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಬದುಕಿಗೆ ನಿತ್ಯ ಅನ್ನ, ನೀರು ಅವಶ್ಯವಾಗಿರುವಂತೆ ಮನುಷ್ಯನು ಸದ್ಗತಿ ಪಡೆಯಲು ಆಧ್ಯಾತ್ಮಿಕ ವಿಚಾರಗಳನ್ನು ಶ್ರವಣ ಮಾಡಬೇಕು. ನವವಿಧ ಭಕ್ತಿಗಳಲ್ಲಿ ಶ್ರವಣ ಭಕ್ತಿಯೂ ಶ್ರೇಷ್ಠವೆಂದು ಕರೆಸಿಕೊಂಡಿದೆ. ಜೀವಾತ್ಮನು ಜನ್ಮತಾಳಿದಾಗಿನಿಂದ ಸಾಂಸಾರಿಕ ವಿಷಯಗಳನ್ನೇ ಕೇಳುತ್ತ ಸಂಸಾರದ ಮೋಹ ಪಾಶದಲ್ಲಿ ಇರುತ್ತಾನೆ. ಯಾವ ವ್ಯಕ್ತಿ ಸದ್ಗುರುಗಳ ಆಧ್ಯಾತ್ಮಿಕ ಶಾಸಗಳನ್ನು ತಪ್ಪದೇ ಶ್ರವಣ ಮಾಡುತ್ತಾನೋ ಅವನು ಸದ್ಗತಿ ಪಡೆದುಕೊಳ್ಳುತ್ತಾನೆ ಎಂದರು.
ತುಪ್ಪವನ್ನು ತಿಂದ ನಾಲಿಗೆಯು ತುಪ್ಪದ ಜಿಡ್ಡನ್ನು ಅಂಟಿಸಿಕೊಳ್ಳದಂತೆ ಸಂಸಾರದಲ್ಲಿದ್ದು ಆ ವ್ಯಾಮೋಹದಿಂದ ಮುಕ್ತನಾಗಿರಬೇಕಾದರೆ ಅಧ್ಯಾತ್ಮ ಶಾಸದ ಬಗ್ಗೆ ಅರಿಯಬೇಕು. ಗದಗ ಬೆಟಗೇರಿ ಅವಳಿ ನಗರಗಳಲ್ಲಿ ಕಳೆದ 25 ವರ್ಷಗಳಿಂದ ಶ್ರೀ ಸಿದ್ಧಾಂತ ಶಿಖಾಮಣಿಯ ಆಧ್ಯಾತ್ಮಿಕ ಆಶೀರ್ವಚನ ಕಾರ್ಯಕ್ರಮವು ನಿರಂತರವಾಗಿ ನಡೆದುಕೊಂಡು ಬಂದಿರುವುದು ಇದಕ್ಕೆ ನಿದರ್ಶನವಾಗಿದೆ ಎಂದರು.
ಸಚಿವ ಎಚ್.ಕೆ. ಪಾಟೀಲ ಮಾತನಾಡಿ, ಕಾಶೀ ಜಗದ್ಗುರುಗಳ ಶ್ರೀ ಸಿದ್ಧಾಂತ ಶಿಖಾಮಣಿ ಪ್ರವಚನ ಆರಂಭವಾಗಿ 25 ವರ್ಷ ಹೇಗೆ ಕಳೆದವು ಎಂಬುದು ಗೊತ್ತಾಗಲಿಲ್ಲ. ಕಳೆದ 25 ವರ್ಷಗಳ ಹಿಂದೆ ಅಂದಿನ ಶಾಸಕರಾಗಿದ್ದ ಡಿ.ಆರ್. ಪಾಟೀಲ ಅವರು ಎಲ್ಲರನ್ನು ಒಗ್ಗೂಡಿಸಿಕೊಂಡು ವಿಧಾಯಕ ಕಾರ್ಯಕ್ರಮಕ್ಕೆ ಮುನ್ನುಡಿ ಬರೆದರು. ಅಂದು ಕಾಶೀ ಜಗದ್ಗುರುಗಳಿಂದ ಭಗವದ್ಗೀತೆ ಹಾಗೂ ಸಿದ್ಧಾಂತ ಶಿಖಾಮಣಿ ಪ್ರವಚನ ಆರಂಭವಾತು. ಅಂದಿನಿಂದ ಇಲ್ಲಿಯವರೆಗೆ ಪೂಜ್ಯರು ಪ್ರತಿ ಆಷಾಢ ಮಾಸದಲ್ಲಿ ಪ್ರವಚನವನ್ನು ದಯಪಾಲಿಸಿದ್ದಾರೆ. ಜನರಲ್ಲಿ ಮನಸು ಕಟ್ಟುವ, ಆತ್ಮವಿಶ್ವಾಸ ಮೂಡಿಸುವ, ಭಕ್ತಿಭಾವ ಬೆಳೆಸುವ ಮನೋಭಾವ ಪ್ರೇರಣಾದಾಯಕವಾಗಿದೆ ಎಂದರು.
ಡಾ. ಕೊಟ್ಟೂರ ಬಸವೇಶ್ವರ ಶಿವಾಚಾರ್ಯರ ಸ್ವಾಮೀಜಿ, ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ರಾಜಶೇಖರ ಶಿವಾಚಾರ್ಯ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ವಿ.ಕೆ. ಗುರುಮಠ, ಎಸ್.ಎಸ್. ಮೇಟಿ, ಮಹೇಶ್ಚಂದ್ರ ಕಬಾಡರ, ಬಸವರಾಜ ಅಂಗಡಿ, ಚಂದ್ರು ಬಾಳಿಹಳ್ಳಿಮಠ, ವೀರಣ್ಣ ಚಂದ್ರಗೌಡ್ರ, ನಾಗೇಶ ಹಂಜಿಗಿ, ಆರ್.ಕೆ. ಮಠದ, ವಿಜಯಾ ಪಾಟೀಲ, ಪಂಚಾಕ್ಷರಯ್ಯ ಹಿರೇಮಠ, ರಾಜಶೇಖರಯ್ಯ ವಸದ, ಶಾಂತೇಶ ಅರಮನಿ ಇತರರು ಇದ್ದರು