ಬಸ್ರೂರು ತುಳುವೇಶ್ವರ ದೇವಳದಲ್ಲಿ ಆಧ್ಯಾತ್ಮಿಕ ಕುರುಹು ಪತ್ತೆ

gan (8)
Published on

ಕುಂದಾಪುರ: ಬಸ್ರೂರಿನ ಪುರಾತನ ತುಳುವೇಶ್ವರ ದೇವಸ್ಥಾನದಲ್ಲಿ ಅ.6ರಿಂದ ಆರಂಭಗೊಂಡ ಅಷ್ಟಮಂಗಳ ಪ್ರಶ್ನೆ ಚಿಂತನೆ ವೇಳೆ ಮಹತ್ವದ ಆಧ್ಯಾತ್ಮಿಕ ಕುರುಹು ಪತ್ತೆಯಾಗಿದೆ. ಮುಳಲದೇವಿ ತುಳುವೇಶ್ವರಿ ದೇವಾಲಯದ ಅಸ್ತಿತ್ವ ಮತ್ತು ಅದರ ತಾತ್ವಿಕ ಮಹತ್ವ ಬೆಳಕಿಗೆ ಬಂದಿದೆ. ತುಳುವೇಶ್ವರ ದೇವಾಲಯದ ಪೂರ್ವ ದಿಕ್ಕಿನಲ್ಲಿ ದೇವಾಲಯದ ಕುರುಹುಗಳು ಪತ್ತೆಯಾಗಿದ್ದು, ಮುಳಲದೇವಿ ತುಳುವೇಶ್ವರಿ ಪೂಜಿತಳಾದ ಈ ದೇವಾಲಯದಲ್ಲಿ ಅತ್ಯಂತ ರಹಸ್ಯಮಯ ತಾಂತ್ರಿಕ ಶಕ್ತಿಯ ಶ್ರೀಚಕ್ರ ಸ್ಥಾಪನೆಯಾಗಿತ್ತು. ಈ ಶ್ರೀಚಕ್ರವು ಕಾಲಕ್ರಮೇಣ ನೇಪಾಳ ದೇಶಕ್ಕೆ ಹತ್ತಾಂತರಗೊಂಡಿದೆ ಎಂಬ ವಾಹಿತಿಯೂ ಪ್ರಶ್ನೆಯ ವೇಳೆ ಕಂಡುಬಂತು. ದೇವಿಯ ಶ್ರೀಚಕ್ರವನ್ನು ಹುಡುಕಿ, ಮರುಸ್ಥಾಪನೆ ವಾಡಿದಲ್ಲಿ, ಇಡೀ ಭಾರತ ದೇಶದ ಆಧ್ಯಾತ್ಮಿಕ ಪುನರುಜ್ಜೀವನಕ್ಕೂ, ಶ್ರೇಷ್ಠ ಯುಗದ ಆರಂಭಕ್ಕೂ ಕಾರಣವಾಗಲಿದೆ ಎಂಬ ವಿಶಿಷ್ಟ ಸಂದೇಶವೂ ಪ್ರಕಟವಾಗಿದೆ. ತುಳುವೇಶ್ವರ ಹಾಗೂ ತುಳುವೇಶ್ವರಿ ದೇವಿಯ ಎರಡೂ ದೇವಾಲಯಗಳು ಜತೆಯಾಗಿ ಜೀರ್ಣೋದ್ಧಾರಗೊಳ್ಳಬೇಕೆಂಬ ಸೂಚನೆ ಅಷ್ಟಮಂಗಳ ಪ್ರಶ್ನೆಯಲ್ಲಿ ದೊರೆತಿದೆ. ಶ್ರೀಚಕ್ರ ಪತ್ತೆ ಹಚ್ಚಲು ತುಳುವರ್ಲ್ಡ್ ಫೌಂಡೇಶನ್ ತಾತ್ವಿಕ ಹಾಗೂ ಆಧ್ಯಾತ್ಮಿಕ ವಿಶ್ಲೇಷಣೆ ಆರಂಭಿಸಿದ್ದು, ಮುಂದಿನ ಕ್ರಮಗಳು ಮತ್ತು ಮರುಸ್ಥಾಪನಾ ಕಾರ್ಯಯೋಜನೆ ರೂಪಿಸಲು ಸಜ್ಜಾಗಿದೆ.

ತುಳುನಾಡಿನ ಜನಪದ, ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಪಾರಂಪರ್ಯದ ಪುನರುದ್ಧಾರಕ್ಕೆ ಈ ಪತ್ತೆಯು ಹೊಸ ಬೆಳಕು ತಂದಿದೆ. ತುಳುವೇಶ್ವರಿ ದೇವಾಲಯದ ಪತ್ತೆ ತುಳುವರಲ್ಲಿ ಹೊಸ ಭಕ್ತಿ, ನಂಬಿಕೆ ಮತ್ತು ಚೈತನ್ಯ ಮೂಡಿಸಿದೆ. -ಸರ್ವೋತ್ತಮ ಶೆಟ್ಟಿ (ಅಬುಧಾಬಿ), ತುಳುವರ್ಲ್ಡ್ ಫೌಂಡೇಶನ್ ಅಧ್ಯಕ್ಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net