ಜೀವನ ಪ್ರೇರಣೆ ಕೊಡುವ ಬಸವಧರ್ಮ: ಬಸವೇಶ್ವರ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತದ ಅಧ್ಯಕ್ಷ ನಾಗರಾಜು ಹೇಳಿಕೆ

Spiritual Program Mandya
Published on

ಮಂಡ್ಯ: ಹೃದಯ, ಮನಸ್ಸು ಹಾಗೂ ನಮ್ಮ ಜೀವನದ ನಡೆಗೆ ಪ್ರೇರಣೆ ಕೊಡುವ ಏಕೈಕ ಧರ್ಮ ಬಸವ ಧರ್ಮ ಮಾತ್ರ ಎಂದು ಜಗಜ್ಯೋತಿ ಬಸವೇಶ್ವರ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತದ ಜಿಲ್ಲಾಧ್ಯಕ್ಷ ಎಸ್.ನಾಗರಾಜು ಹೇಳಿದರು.

ನಗರದ ವೀರಶೈವ ವಿದ್ಯಾರ್ಥಿ ನಿಲಯದಲ್ಲಿ ಜಗಜ್ಯೋತಿ ಬಸವೇಶ್ವರ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತದ ವತಿಯಿಂದ ಆಯೋಜಿಸಿದ್ದ ಮನೆ ಮನೆಗೆ ಸೌಹಾರ್ಧ ಬಸವ ಜ್ಯೋತಿ ಕಾರ್ಯಕ್ರಮದ 148ನೇ ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಏನೂ ಅರಿಯದ ಒಂದು ಮರವೇ ಸಣ್ಣ ಅಪೇಕ್ಷೆಯೂ ಇಲ್ಲದೆ ಪರೋಪಕಾರವನ್ನು ಬಗೆಯುತ್ತದೆ. ಹಾಗೆಯೇ ನಾವು ಕೂಡ ನಿಸ್ವಾರ್ಥದಿಂದ ಪರೋಪಕಾರ ಮಾಡಬೇಕು. ಅದಕ್ಕಾಗಿ ನಾವು ಧಾರ್ಮಿಕ ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದರು.

ಪ್ರಸ್ತುತ ದಿನಗಳಲ್ಲಿ ಯಾವುದೇ ಚಿಂತೆ ಇಲ್ಲದೆ ಇಂತಹ ಕಾರ್ಯಕ್ರಮಗಳಲ್ಲಿ ಏಕಚಿತ್ತದಿಂದ ಭಾಗವಹಿಸುವ ಮೂಲಕ ನಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬಹುದು. ಪ್ರತಿಯೊಬ್ಬರಿಗೂ ಸಹ ಬಸವಧರ್ಮದ ಆದರ್ಶಗಳು ಬೇಕಾಗಿದೆ. ನಿರಂತರವಾಗಿ ಯಾರು ಬಸವ ಧರ್ಮದ ಮಾರ್ಗದಲ್ಲಿ ನಡೆದುಕೊಳ್ಳುತ್ತಾರೋ ಅವರನ್ನು ಈ ಧರ್ಮವು ಸನ್ಮಾರ್ಗದಲ್ಲಿ ಕರೆದೊಯ್ಯುವುದರ ಜತೆಗೆ ಸಜ್ಜನರನ್ನಾಗಿ ಬದುಕಲು ಅವಕಾಶವನ್ನು ಮಾಡಿಕೊಡುತ್ತದೆ. ಪೂಜೆ ಮಾಡಲು ನಾವುಗಳು ದೂರದಲ್ಲಿರುವ ಕಾಶಿಯಾತ್ರೆ ಹಾಗೂ ಕೇದರನಾಥಕ್ಕೆ ಹೋಗಬೇಕಾದ ಅವಶ್ಯಕತೆ ಇರುವುದಿಲ್ಲ. ಬದಲಿಗೆ ಬಸವ ಧರ್ಮವನ್ನು ಪ್ರತೀ ತಿಂಗಳು ಸಾರುವ ಈ ಬಗೆಯ ಕಾರ್ಯಕ್ರಮಗಳಲ್ಲಿ ಚಾಚೂ ತಪ್ಪದೇ ಪಾಲ್ಗೊಳ್ಳಬೇಕೆಂದು ಅಭಿಪ್ರಾಯಪಟ್ಟರು.

ಚನ್ನಪಟ್ಟಣ ವಿರಕ್ತಮಠದ ಚರಮೂರ್ತಿ ಶಿವರುದ್ರ ಸ್ವಾಮೀಜಿ ಸಾನಿಧ್ಯ ವಹಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಸಂಘದ ಉಪಾಧ್ಯಕ್ಷ ದ್ಯಾಮಣ್ಣ, ನಿರ್ದೇಶಕರಾದ ಶಿವಕುಮಾರ್, ಪುಟ್ಟಬುದ್ದಿ, ಮಹದೇವಸ್ವಾಮಿ, ಮುಖಂಡರಾದ ಮಹೇಶ್, ಮಂಜು, ಮಧು, ಮೋಹನ್, ಜಗದೀಶ್ ಇತರರಿದ್ದರು. ಇದೇ ಸಂದರ್ಭದಲ್ಲಿ ವಿಶ್ವ ಛಾಯಾಗ್ರಾಹಕರ 185ನೇ ದಿನಾಚರಣೆ ಅಂಗವಾಗಿ ಪತ್ರಿಕಾ ಛಾಯಾಗ್ರಾಹಕ ಕೆ.ವೇಣುಗೋಪಾಲ್ ಅವರನ್ನು ಅಭಿನಂದಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net