ಬಸವ ಧರ್ಮ ಪಾಲನೆಯಿಂದ ಸನ್ಮಾರ್ಗ: ಬಸವೇಶ್ವರ ಪತ್ತಿನ ಸೌಹಾರ್ದ ನಿಯಮಿತದ ಜಿಲ್ಲಾಧ್ಯಕ್ಷ ನಾಗರಾಜು ಹೇಳಿಕೆ

Spiritual program at Bilaguli village Mandya
Published on

ಮಂಡ್ಯ: ಬಸವ ಧರ್ಮದಲ್ಲಿ ಯಾರು ನಡೆದುಕೊಳ್ಳುತ್ತಾರೋ ಅವರಿಗೆ ಈ ಧರ್ಮವು ಸನ್ಮಾರ್ಗದಲ್ಲಿ ಕರೆದೊಯ್ಯುತ್ತದೆ. ಮಾತ್ರವಲ್ಲದೆ ಅವರು ಸಜ್ಜನರನ್ನಾಗಿ ಬದುಕಲು ಅವಕಾಶವನ್ನು ಮಾಡಿಕೊಡುತ್ತದೆ ಎಂದು ಜಿಲ್ಲಾ ಬಸವೇಶ್ವರ ಪತ್ತಿನ ಸೌಹಾರ್ದ ನಿಯಮಿತದ ಅಧ್ಯಕ್ಷ ಎಸ್.ನಾಗರಾಜು ಅಭಿಪ್ರಾಯಪಟ್ಟರು.

ತಾಲೂಕಿನ ದುದ್ದ ಹೋಬಳಿಯ ಬಿಳಗುಲಿ ಗ್ರಾಮದಲ್ಲಿ ಜಗಜ್ಯೋತಿ ಬಸವೇಶ್ವರರ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತದ ವತಿಯಿಂದ ಆಯೋಜಿಸಿದ್ದ ಮನೆ ಮನೆಗೆ ಸೌಹಾರ್ದ ಬಸವ ಜ್ಯೋತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ಸಂದರ್ಭದಲ್ಲಿ ಇಡೀ ಪ್ರಪಂಚಕ್ಕೆ ಬಸವ ಧರ್ಮದ ಆದರ್ಶಗಳು ಪ್ರತಿಯೊಬ್ಬರಿಗೂ ಸಹ ಬೇಕಾಗಿದೆ. ನಮ್ಮ ಹೃದಯ, ಮನಸ್ಸು ಹಾಗೂ ನಮ್ಮ ಜೀವನದ ಕಡೆಗೆ ಪ್ರೇರಣೆಯನ್ನು ಕೊಡುವ ಏಕೈಕ ಧರ್ಮವೆಂದರೆ ಅದೇ ಬಸವ ಧರ್ಮ ಎಂದರು.

ಬಸವಣ್ಣನವರ ಮೌಲ್ಯಯುತವಾದ ವಚನಗಳನ್ನು ಮನೆಮನೆಗಳಲ್ಲಿ ಮಕ್ಕಳಿಗೆ ಹಾಗೂ ಕುಟುಂಬ ಸದಸ್ಯರಲ್ಲಿರಿಗೂ ಸಹ ಭೋದಿಸುವುದರಿಂದ ವ್ಯಕ್ತಿಗತ ಸುಧಾರಣೆ ಆಗುತ್ತದೆ. ಬಸವಣ್ಣನವರು ಶಿಕ್ಷಣಕ್ಕೆ ಮಹತ್ತರ ಹಾಗೂ ಮೌಲ್ಯಯುತವಾದ ವಚನಗಳನ್ನು ಕಾಣಿಕೆಯಾಗಿ ನೀಡಿರುತ್ತಾರೆ. ವಚನಗಳು ಪ್ರಾಣ ಇದ್ದಂತೆ, ಅವುಗಳೆಲ್ಲವನ್ನು ಸಂರಕ್ಷಿಸುವ ಹೊಣೆಯು ನಮ್ಮದಾಗಿದೆ ಎಂದು ಅಭಿಪ್ರಾಯಪಟ್ಟರು.

ಪಾಂಡವಪುರ ತಾಲೂಕಿನ ಬೇಬಿಬೆಟ್ಟದ ಶ್ರೀರಾಮಯೋಗಿಶ್ವರ ಮಠದ ಶಿವಬಸವ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಸಂಘದ ಉಪಾಧ್ಯಕ್ಷ ಡಿ.ದ್ಯಾವಣ್ಣ, ಮಾಜಿ ಅಧ್ಯಕ್ಷ ರುದ್ರಸ್ವಾಮಿ, ಮಹದೇವಯ್ಯ, ಪುಟ್ಟಸ್ವಾಮಿ, ಶಂಕರಣ್ಣ, ದೇವನೂರು ಜಗದೀಶ್, ಮಧುಸೂದನ್ ಇತರರಿದ್ದರು.

ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಮಹಾದೇವಯ್ಯ, ಎಚ್.ಸಿ.ಶಿವಕುಮಾರ್, ಪುಟ್ಟಮಾದಯ್ಯ, ಕೆ.ವೇಣುಗೋಪಾಲ್ ಅವರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದ ನಂತರ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net