

ಹುಬ್ಬಳ್ಳಿ : ದೇಶದಲ್ಲಿನ ಮಠ, ಮಂದಿರ ಕೇವಲ ಧಾರ್ವಿುಕ ಕೇಂದ್ರಗಳಾಗಿರದೇ ಸಾಮಾಜಿಕ ಬದಲಾವಣೆಗೂ ಕಾರಣವಾಗಿವೆ. ಪರಮಾಣು ಶಕ್ತಿಗಿಂತ ಆಧ್ಯಾತ್ಮಿಕ ಶಕ್ತಿ ದೊಡ್ಡದು ಎಂದು ಉಪ ರಾಷ್ಟ್ರಪತಿ ಜಗದೀಪ ಧನಕರ ಹೇಳಿದರು.
ಇಲ್ಲಿನ ವರೂರ ನವಗ್ರಹ ತೀರ್ಥಕ್ಷೇತ್ರದಲ್ಲಿ ಆಯೋಜಿಸಿರುವ 61 ಅಡಿ ಎತ್ತರದ ಭಗವಾನ್ ಶ್ರೀ ಪಾರ್ಶ್ವನಾಥರ ಮಹಾಮಸ್ತಕಾಭಿಷೇಕ ಹಾಗೂ 405 ಅಡಿ ಎತ್ತರದ ಸುಮೇರು ಪರ್ವತ ಜಿನಬಿಂಬ ಪ್ರತಿಷ್ಠಾ ಪಂಚಕಲ್ಯಾಣ ಮಹಾಮಹೋತ್ಸವ ಸಮಾರಂಭದಲ್ಲಿ ಸುಮೇರು ಪರ್ವತ ಮಾದರಿಯನ್ನು ಗುರುವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಸುಮೇರು ಪರ್ವತ ಧಾರ್ವಿುಕತೆಯ ಮೇರು ಪರ್ವತ. ಜೈನ ಧರ್ಮದಲ್ಲಿ ಸುಮೇರು ಪರ್ವತಕ್ಕೆ ಹೆಚ್ಚು ಮಹತ್ವ ಇದೆ. ನಂಬಿಕೆ, ಜ್ಞಾನ, ಅಧ್ಯಾತ್ಮಗಳ ಪ್ರತಿರೂಪ ಜೈನ ಧರ್ಮ. ಜೀವನ ಸಾಕಾರಗೊಳ್ಳಬೇಕಾದರೆ ಬೌದ್ಧಿಕ ಉನ್ನತಿ ಜತೆಗೆ ಅಧ್ಯಾತ್ಮದ ಅವಶ್ಯಕತೆಯೂ ಇದೆ ಎಂದರು.
ವಿಶ್ವಶಾಂತಿಗೆ ಜೈನ ಧರ್ಮದ ತತ್ವಗಳ ಪಾಲನೆ ಅಗತ್ಯ. ಅಹಿಂಸಾ ಪರಮೋಧರ್ಮದ ನಿಯಮಗಳು ಜಾಗತಿಕ ಬಿಕ್ಕಟ್ಟು ನಿವಾರಣೆಗೆ ಸಹಾಯಕವಾಗಲಿವೆ. ಪ್ರತಿಯೊಬ್ಬರಲ್ಲಿ ವಸುಧೈವ ಕುಟುಂಬಕಂ ಪರಿಕಲ್ಪನೆ ಬರಬೇಕಿದೆ. ಜಾಗತಿಕ ವಿಕಾಸಕ್ಕೆ ಭಾರತ ವಿಶ್ವಗುರು ಆಗಲಿದೆ. ಭಾರತೀಯ ಸಂಸ್ಕೃತಿ ಶ್ರೀಮಂತವಾಗಿದ್ದು, ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬ ಭಾರತೀಯರದ್ದು ಎಂದು ಹೇಳಿದರು.
ಸಮಾನತೆ, ಸಹಬಾಳ್ವೆಗೆ ವರೂರು ನವಗ್ರಹ ಕ್ಷೇತ್ರಗಳಂತಹ ಆಧ್ಯಾತ್ಮಿಕ ಕ್ಷೇತ್ರಗಳ ಅವಶ್ಯಕತೆ ಇದೆ. ವರೂರಿನಲ್ಲಿ ಶ್ರೀ ಗುಣಧರನಂದಿ ಮಹಾರಾಜರು ಕ್ಷೇತ್ರವನ್ನು ಅಭಿವೃದ್ಧಿಗೊಳಿಸಿದ್ದಾರೆ. ಧಾರ್ವಿುಕದ ಜತೆಗೆ ಶಿಕ್ಷಣ ಕೇಂದ್ರವನ್ನಾಗಿ ಬೆಳೆಸಿದ್ದಾರೆ ಎಂದರು.
ರಾಜ್ಯಪಾಲ ಥಾವರ್ಚಂದ್ ಗೆಹಲೋತ್ ಮಾತನಾಡಿ, ಧರ್ಮ, ಸಂಸ್ಕೃತಿ ರಕ್ಷಣೆ ಮೂಲಕ ದೇಶದ ಹಿತ ಕಾಯಬೇಕು ಎಂದು ಸಲಹೆ ನೀಡಿದರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ನವಗ್ರಹ ತೀರ್ಥಕ್ಷೇತ್ರವನ್ನು ಅಭಿವೃದ್ಧಿಪಡಿಸಿ, ಧಾರ್ವಿುಕ ಕೇಂದ್ರವಾಗಿ ಪರಿವರ್ತಿಸಿದ ಕೀರ್ತಿ ಶ್ರೀ ಗುಣಧರನಂದಿ ಮಹಾರಾಜರಿಗೆ ಸಲ್ಲುತ್ತದೆ. ಖಾಲಿ ಜಾಗ ಇದ್ದ ವರೂರು ಕ್ಷೇತ್ರದಲ್ಲಿ 20 ವರ್ಷಗಳಲ್ಲಿ 13 ಕಾಲೇಜು ಹಾಗೂ ಧಾರ್ವಿುಕ ಯಾತ್ರಾ ಹಾಗೂ ಪ್ರವಾಸಿ ತಾಣವನ್ನು ನಿರ್ವಿುಸಿದ್ದಾರೆ ಎಂದು ಹೇಳಿದರು.
ಉಪ ರಾಷ್ಟ್ರಪತಿ ಜಗದೀಪ ಧನಕರ ಹಾಗೂ ಡಾ. ಸುದೇಶ ಧನಕರ ದಂಪತಿ ಮುನಿಸುವ್ರತ ತೀರ್ಥಂಕರ ಮೂರ್ತಿಗೆ ಸಾಂಕೇತಿಕ ಅಭಿಷೇಕ ಮಾಡುವ ಮೂಲಕ ಭಗವಾನ್ ಶ್ರೀ ಪಾರ್ಶ್ವನಾಥರ ಮಹಾಮಸ್ತಕಾಭಿಷೇಕಕ್ಕೆ ಚಾಲನೆ ನೀಡಿದರು.
ಗಣಾಧಿಪತಿ ಶ್ರೀ ಕುಂಥುಸಾಗರ ಮಹಾರಾಜರು ಹಾಗೂ ರಾಷ್ಟ್ರಸಂತ ಯುವಾಚಾರ್ಯ ಶ್ರೀ ಗುಣಧರನಂದಿ ಮಹಾರಾಜರು ಆಶೀರ್ವಚನ ನೀಡಿದರು.
ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ, ಶ್ರೀ ಧರ್ಮಸೇನ ಭಟ್ಟಾರಕರು, ಜೈನ ಸಮಾಜದ ಮುಖಂಡ ಮಹೇಂದ್ರ ಸಿಂಘಿ ಹಾಗೂ ಇತರರು ಹಾಜರಿದ್ದರು.