

ಶಿಕಾರಿಪುರ: ಭಾರತ ಜಗತ್ತನ್ನು ಗೆದ್ದಿರುವದು ತನ್ನ ಆಧ್ಯಾತ್ಮಿಕ ಶಕ್ತಿಯ ಬಲದಿಂದ. ಭಾರತದ ಮಣ್ಣಿನ ಕಣಕಣದಲ್ಲಿ ಆಧ್ಯಾತ್ಮಿಕ ಶಕ್ತಿ ಪ್ರವಹಿಸುತ್ತಿದೆ ಎಂದು ಭೋವಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಸಣ್ಣ ಹನುಮಂತಪ್ಪ ಹೇಳಿದರು.
ತಾಲೂಕಿನ ತೊಗರ್ಸಿ ಗ್ರಾಮಕ್ಕೆ ಗುರುವಾರ ಆಗಮಿಸಿದ ಹನುಮಾನ್ ರಥವನ್ನು ಸ್ವಾಗತಿಸಿ ಮಾತನಾಡಿದ ಅವರು, ಕೋಟಿ ಕೋಟಿ ಭಾರತೀಯರ ನಿರೀಕ್ಷೆಯಂತೆ ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆಯಾಗಿದೆ. ಪ್ರತಿದಿನ ಸಾಂಪ್ರದಾಯಬದ್ಧವಾಗಿ ಪೂಜೆ ಪುನಸ್ಕಾರಗಳು ನಡೆಯುತ್ತಿದೆ. ನಾನು ಕೂಡ ಕರಸೇವಕನಾಗಿ ಹೋಗಿ ನನ್ನ ಅಳಿಲು ಸೇವೆಯನ್ನು ಸಲ್ಲಿಸಿ ಬಂದಿದ್ದೇನೆ. ಜೈಲುವಾಸ ಕೂಡ ಅನುಭವಿಸಿದ್ದೇನೆ. ಪ್ರಭು ಶ್ರೀ ರಾಮಚಂದ್ರನ ದರ್ಶನಕ್ಕೆ ಪ್ರತಿದಿನ ಲಕ್ಷಾಂತರ ಭಕ್ತರು ಅಯೋಧ್ಯೆಗೆ ಬರುತ್ತಿದ್ದಾರೆ. ಅಯೋಧ್ಯೆ ಈಗ ರಾಮನಿಂದ ಜಗತ್ತಿನ ಗಮನಸೆಳೆದಿದೆ ಎಂದರು.
ಐದು ಶತಮಾನಗಳ ನಿರಂತರ ಹೋರಾಟ, ಸಾಧು-ಸಂತ, ಮಹಾಂತರ, ಋಷಿ-ಮುನಿಗಳ ತಪಸ್ಸು ಫಲ ನೀಡಿದೆ. ರಾಮ ಜನ್ಮಭೂಮಿ ಮುಕ್ತಿ ಹೋರಾಟದಲ್ಲಿ ಲಕ್ಷಾಂತರ ರಾಮಭಕ್ತರು ತಮ್ಮ ಪ್ರಾಣ ಸಮರ್ಪಣೆ ಮಾಡಿಕೊಂಡಿದ್ದಾರೆ. ರಾಮಭಕ್ತರು ಸಮರೋಪಾದಿಯಲ್ಲಿ ಹೋರಾಟ ಮಾಡಿದ್ದರ ಫಲ ಕಾನೂನಿನ ಶ್ರೀರಕ್ಷೆಯಡಿಯಲ್ಲಿ ರಾಮಲಲ್ಲಾ ಮತ್ತೆ ಅಯೋಧ್ಯೆಯಲ್ಲಿ ವಿರಾಜಮಾನನಾಗಿದ್ದಾನೆ ಎಂದು ಹೇಳಿದರು.
ಪ್ರಭು ಶ್ರೀ ರಾಮಚಂದ್ರ ನಮ್ಮ ಶ್ರದ್ಧಾ ಪುರುಷ. ಹನುಮ ರಥಯಾತ್ರೆಯ ಮೂಲಕ ಶ್ರೀ ರಾಮಜನ್ಮಭೂಮಿ ಮುಕ್ತಿಗಾಗಿ ನಡೆದ ಹೋರಾಟಗಳ ಅರಿವು ಮೂಡಿಸಲಾಗುವುದು. ಜಗತ್ತಿನ ಏಕೈಕ ಪರಮ ಸೇವಕನೆಂದೇ ಖ್ಯಾತನಾದ ಶ್ರೀ ಹನುಮಾನ್‌ನ ರಥ ನಮ್ಮಲ್ಲಿ ಧಾರ್ಮಿಕ ಪ್ರಜ್ಞೆ ಜಾಗೃತಗೊಳಿಸಲಿದೆ. ಜತೆಗೆ ಶ್ರೀ ರಾಮನಾಮಸ್ಮರಣೆಯ ಮಹತ್ವವನ್ನು ಸಾರುತ್ತಾ ನಾಡಿನಲ್ಲಿ ಸಂಚರಿಸುತ್ತಿದೆ ಎಂದರು.
ಗ್ರಾಪಂ ಅಧ್ಯಕ್ಷ ಎಸ್.ನಿರಂಜನ್, ಮಾಜಿ ಅಧ್ಯಕ್ಷ ರುದ್ರಪ್ಪ, ಸದಸ್ಯ ಜಗದೀಶ್, ಮಲ್ಲಿಕಾರ್ಜುನ ಯುವಕ ಸಂಘದ ಅಧ್ಯಕ್ಷ ಅನಿಲ್, ಮಂಜಪ್ಪ ದೇವಿಕೊಪ್ಪ, ಮಹೇಶ್, ಸದಾನಂದ, ಗಿರೀಶ್ ಗೌಡ, ಉಮೇಶ್ ಗೌಡ ಇದ್ದರು.