

ಧಾರವಾಡ: ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ಜ. 20 ರಂದು ಶಿವಾನಂದಮಠದ ಲಿಂಗೈಕ್ಯ ಶ್ರೀ ವಾಸುದೇವ ಸ್ವಾಮೀಜಿ ಹಾಗೂ ಲಿಂಗೈಕ್ಯ ಶ್ರೀ ಬಸವರಾಜ ಸ್ವಾಮೀಜಿ ಪುಣ್ಯಾರಾಧನೆ ನಿಮಿತ್ತ 10 ದಿನಗಳ ಅಧ್ಯಾತ್ಮ ಚಿಂತನ ಸಮಾವೇಶ ಜರುಗಲಿದೆ.
ಹೆಬ್ಬಳ್ಳಿ ಶಿವಾನಂದಮಠದ ಬ್ರಹ್ಮಾನಂದ ಸ್ವಾಮೀಜಿ ಹಾಗೂ ಹಳಕಟ್ಟಿ ಬ್ರಹ್ಮವಿದ್ಯಾಶ್ರಮದ ಶ್ರೀ ನಿಜಗುಣ ಸ್ವಾಮೀಜಿ ನೇತೃತ್ವದಲ್ಲಿ ಗದಗ ಶಿವಾನಂದಮಠದ ಪೀಠಾಧಿಪತಿ ಶ್ರೀ ಜಗದ್ಗುರು ಅಭಿನವ ಶಿವಾನಂದ ಸ್ವಾಮೀಜಿ ಅಂದು ಬೆಳಗ್ಗೆ 8 ಗಂಟೆಗೆ ಪ್ರಣವ ಧ್ವಜಾರೋಹಣ ನೆರವೇರಿಸಿ ಧರ್ಮ ಸಮಾವೇಶ ಉದ್ಘಾಟಿಸುವರು. ಇನಾಂಹನಮನೇರಿ ಶಾಂತಮಠದ ಶ್ರೀ ಶಿವಾನಂದ ಸ್ವಾಮೀಜಿ ಹಾಗೂ ಬೆಳಗಾವಿ ಸಮೀಪದ ಹೊನ್ನಿಹಾಳ ಸಂತೋಷಕುಮಾರ ಶಾಸ್ತ್ರಿಗಳು ಜ. 20ರಿಂದ 30 ರವರೆಗೆ ನಿತ್ಯ ಸಂಜೆ 8 ರಿಂದ 10 ಗಂಟೆಯವರೆಗೆ ಹಾಗೂ ಸಂಜೆ 7 ರಿಂದ ರಾತ್ರಿ 10 ಗಂಟೆಯವರೆಗೆ ಕ್ರಮವಾಗಿ ಪ್ರವಚನ ಮತ್ತು ಕೀರ್ತನ ನೀಡುವರು.
ಉಪದೇಶಾಮೃತ
ಹೆಬ್ಬಳ್ಳಿ ಚೈತನ್ಯಾಶ್ರಮದ ದತ್ತಾವಧೂತ ಶ್ರೀಗಳು, ಶ್ರೀ ಯೋಗಾನಂದ ಸ್ವಾಮೀಜಿ, ಶರಣೆ ಅನಸಮ್ಮತಾಯಿ ಹಾಗೂ ಶರಣೆ ಬಸಮ್ಮತಾಯಿ ಜತೆಗೆ ಕಾಡರಕೊಪ್ಪ, ಇಬ್ರಾಹಿಂಪೂರ, ನಿರ್ವಾಣಹಟ್ಟಿ, ಕುಸುಗಲ್ಲ, ರನ್ನತಿಮ್ಮಾಪೂರ, ದಾದನಟ್ಟಿ, ಲೋಕಾಪೂರ, ಬೈಲಹೊಂಗಲ, ಹರಳಕಟ್ಟಿ, ಸಂಗಳ, ಪರಮಾನಂದವಾಡಿ, ಹಳಕಟ್ಟಿ, ಗದಗ ನಗರದ ವಿವಿಧ ಅದ್ವೈತಮಠಗಳ ಸ್ವಾಮೀಜಿಗಳು, ಶಿವಶರಣೆಯರು, ವಿವಿಧ ಸಾಧಕ ಶ್ರೀಗಳು ಹತ್ತು ದಿನಗಳ ಸಮಾವೇಶದಲ್ಲಿ ಉಪದೇಶಾಮೃತ ನೀಡುವರು.
ಮಠದ ರಥೋತ್ಸವ
ಜ. 30 ರಂದು ಸಂಜೆ 5 ಗಂಟೆಗೆ ವಿವಿಧ ಜನಪದ ವಾದ್ಯ-ಮೇಳಗಳೊಂದಿಗೆ ರಥೋತ್ಸವ ಜರುಗುವುದು. ಅದೇ ದಿನ ಪ್ರಾತಃಕಾಲದಲ್ಲಿ ಲಿಂಗೈಕ್ಯ ಶ್ರೀ ವಾಸುದೇವ ಸ್ವಾಮೀಜಿ ಹಾಗೂ ಲಿಂಗೈಕ್ಯ ಶ್ರೀ ಬಸವರಾಜ ಸ್ವಾಮೀಜಿ ಗದ್ದುಗೆಗಳಿಗೆ ರುದ್ರಾಭಿಷೇಕ, ನೂರೊಂದು ಬಿಲ್ವಾರ್ಚನೆ ಜರುಗುವುದು. ಮಧ್ಯಾಹ್ನ ಪ್ರಸಾದ ವಿತರಣೆ ನಡೆಯಲಿದೆ. ಅಮ್ಮಿನಬಾವಿಯ ರುದ್ರಮ್ಮ ಬಸಯ್ಯ ಗುಡಿ ಸೇರಿ ವಿವಿಧ ಸೇವಾಕರ್ತರನ್ನು ಸನ್ಮಾನಿಸಲಾಗುವುದು. ಕರಿಕಟ್ಟಿಯ ರುದ್ರಪ್ಪ ಹೂಗಾರ, ಮಲ್ಲಿಕಾರ್ಜುನ ತೆಗ್ಗಿನಕೇರಿ, ಹೊಳೆಹೊಸೂರಿನ ಗಂಗಾಧರ ಕುಂಬಾರ ಹಾಗೂ ಸಂಗಡಿಗರಿಂದ ನಿತ್ಯವೂ ಸಂಗೀತಸೇವೆ ನಡೆಯಲಿದೆ ಎಂದು ಸಮಾವೇಶದ ಗೌರವ ಸಂಚಾಲಕ ಎಸ್.ಪಿ. ಹೂಗಾರ ತಿಳಿಸಿದ್ದಾರೆ.