ಸಮಾನತೆ ಸಾರಿದ ಮಹಾಪುರುಷ ಬಸವಣ್ಣ: ವಿರಕ್ತಮಠದ ಚರಮೂರ್ತಿ ಶಿವರುದ್ರಸ್ವಾಮಿ ಬಣ್ಣನೆ

4
Published on

ಮಂಡ್ಯ: ಜಗಜ್ಯೋತಿ ಬಸವಣ್ಣನವರು ಈ ಜಗತ್ತಿಗೆ ಸಮಾನತೆಯನ್ನು ಸಾರಿದ ಮಹಾಪುರುಷ ಎಂದು ಚನ್ನಪಟ್ಟಣದ ವಿರಕ್ತಮಠದ ಚರಮೂರ್ತಿ ಶಿವರುದ್ರಸ್ವಾಮಿ ಬಣ್ಣಿಸಿದರು.

ನಗರದ ಗಾಂಧಿಭವನದಲ್ಲಿ ಜಿಲ್ಲಾ ಜಗಜ್ಯೋತಿ ಬಸವೇಶ್ವರ ಪತ್ತಿನ ಸೌಹಾರ್ದ ಸಹಕಾರಿ ಸಂಘದಿಂದ ಸೋಮವಾರ ಸಂಜೆ ಆಯೋಜಿಸಿದ್ದ ಮನೆ ಮನೆಗೆ ಸೌಹಾರ್ದ ಬಸವ ಜಯಂತಿ ಬಸವಜ್ಯೋತಿ ಕಾರ್ಯಕ್ರಮದ 134ನೇ ಆಧ್ಯಾತ್ಮಿಕ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬಸವಣ್ಣ ಅವರು ಬಾಲ್ಯದಿಂದಲೇ ಉಪನಯನ ಕಾರ್ಯಕ್ರಮ ನಡೆಸುತ್ತಿದ್ದರು. ಅದರ ಪರಿಣಾಮವಾಗಿ ಮುಂದೆ ಅವರು ದೊಡ್ಡಮಟ್ಟದಲ್ಲಿ ಬೆಳೆದಿದ್ದರು. ಶಿವಶರಣರ ವಚನಗಳು ನಮ್ಮ ಪ್ರಾಣ ಇದ್ದಂತೆ. ಅದನ್ನು ಸಂರಕ್ಷಿಸುವುದರ ಜತೆಗೆ ಸಂಸ್ಕೃತಿ, ಧರ್ಮ, ವಚನಗಳನ್ನು ರಚಿಸಿಕೊಳ್ಳುವ ಹೊಣೆ ನಮ್ಮದಾಗಿದೆ. 12ನೇ ಶತಮಾನವು ಅನೇಕ ಅನಿಷ್ಟ ಪದ್ದತಿಗಳಿಂದ ತುಂಬಿದ ಕಾಲ. ಅಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸಮಾನತೆಯನ್ನು ಬೋಧಿಸಿದ ಹೆಗ್ಗಳಿಕೆ ಬಸವಣ್ಣ ಅವರಿಗೆ ಸಲ್ಲುತ್ತದೆ ಎಂದರು.

ಹುಣಸೂರು ಡಿ.ದೇವರಾಜ ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ.ತ್ರಿವೇಣಿ ಬಸವಣ್ಣನ ಜೀವನ ಕುರಿತು ಉಪನ್ಯಾಸ ನೀಡಿದರು. ಅಧ್ಯಕ್ಷತೆಯನ್ನು ಸಂಘದ ಜಿಲ್ಲಾಧ್ಯಕ್ಷ ಎಸ್.ನಾಗರಾಜು ವಹಿಸಿದ್ದರು. ಉಪಾಧ್ಯಕ್ಷ ದ್ಯಾವಣ್ಣ, ನಿರ್ದೇಶಕರಾದ ಬಿ.ಎಂ.ಮಹದೇವಸ್ವಾಮಿ, ಎಚ್.ಸಿ.ಶಿವಕುಮಾರ್, ಹೊನ್ನಮ್ಮ, ಲಿಂಗದೇವರು, ಎಸ್.ಆರ್.ಶಿವಕುಮಾರಸ್ವಾಮಿ, ರಾಜಶೇಖರ್, ಎಸ್.ಪಿ.ಉಮೇಶ್, ನಾಗರಾಜು, ಸವಿತಾ, ಕುಮಾರಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net