ಜೀವನದಲ್ಲಿ ಆಧ್ಯಾತ್ಮಿಕ ಜ್ಞಾನ ಅವಶ್ಯ

Published on

ಮಂಗಳೂರು: ಆಧುನಿಕ ಜನಗತ್ತಿನಲ್ಲಿ ಜಗತ್ತು ಬದಲಾಗುತ್ತಿದ್ದಂತೆ ಮಾನವನ ಮಾನಸಿಕತೆ ಬದಲಾಗುತ್ತಿರುತ್ತದೆ. ಮಾನಸಿಕ ಜ್ಞಾನ ಆರೋಗ್ಯ ಕಾಪಾಡುವುದು ಇಂದಿನ ಅಗತ್ಯತೆಯಲ್ಲೊಂದು. ಈ ನಿಟ್ಟಿನಲ್ಲಿ ಜೀವನದಲ್ಲಿ ಆಧ್ಯಾತ್ಮಿಕ ಜ್ಞಾನದ ಅವಶ್ಯಕತೆ ಇದೆ ಎಂದು ಮಾತಾ ಅಮೃತಾನಂದಮಯಿ ಮಠದ ಅಂತರರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಧ್ಯಾತ್ಮಿಕ ಗುರು ಸಂಪೂಜ್ಯಾ ಸ್ವಾಮಿ ಪೂರ್ಣಾಮೃತಾನಂದ ಪುರಿ ಹೇಳಿದರು.

ಮಂಗಳೂರಿನ ಮುಕ್ಕದಲ್ಲಿರುವ ಶ್ರೀನಿವಾಸ್ ಯೂನಿವರ್ಸಿಟಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯಲ್ಲಿ ಅಂತರರಾಷ್ಟ್ರೀಯ ಖ್ಯಾತಿಯ ಮಾತಾ ಅಮೃತಾನಂದಮಯಿ ಮಠದ ಸಹಭಾಗಿತ್ವದಲ್ಲಿ ಜರ್ನಿ ಟವರ್ಡ್ಸ್ ದಿ ಇನ್ನರ್ ವರ್ಲ್ಡ್ (ಆಂತರಿಕ ಪ್ರಪಂಚದ ಕಡೆಗೆ ಪ್ರಯಾಣ) ಮತ್ತು ಫ್ಲ್ಯೂಟ್ ಮೆಡಿಟೇಶನ್ (ಕೊಳಲು ಧ್ಯಾನ) ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಯುವಜನತೆ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ನಿರ್ಧಾರಗಳನ್ನು ಪರಾಮರ್ಶಿಸಿ, ತೀರ್ಮಾನಿಸಿ ಆಮೇಲೆ ಕಾರ್ಯಶೀಲರಾಗಬೇಕು. ನಂಬಿಕೆ ಮತ್ತು ಕಾರ್ಯಗಳ ಸಮ್ಮಿಲನವಿದ್ದಾಗ ಮಾತ್ರ ನಾವು ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಸಾಧ್ಯ. ಜೀವನದಲ್ಲಿ ಯಾವಾಗಲೂ ಭಕ್ತಿ, ನಿರ್ಣಯ ಹಾಗೂ ಶಿಸ್ತನ್ನು ಅಳವಡಿಸಿದಾಗ ಮಾತ್ರ ನಮ್ಮ ಜೀವನವು ಪರಿಪೂರ್ಣವಾಗುವುದು. ಜೀವನದಲ್ಲಿ ಯಾವಾಗಲೂ ಶಿಸ್ತು, ಆಧ್ಯಾತ್ಮಿಕತೆ, ಭಾವನೆಗಳನ್ನು ಹಿಡಿತದಲ್ಲಿರಿಸಿದರೆ ಮಾತ್ರ ನಾವು ಸಮಾಜದಲ್ಲಿ ಉನ್ನತ ಸ್ಥಾನವನ್ನು ಗಳಿಸಿ ಉತ್ತಮ ಪ್ರಜೆಯಾಗಿ ಬಾಳಬಹುದು ಎಂದರು.

ಮಂಗಳೂರಿನ ಮಾತಾ ಅಮೃತಾನಂದಮಯಿ ಮಠದ ಮುಖ್ಯಸ್ಥರಾದ ಸ್ವಾಮಿನಿ ಮಂಗಳಾಮೃತ ಪ್ರಾಣ ಕಾರ್ಯಕ್ರಮ ಉದ್ಘಾಟಿಸಿದರು. ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಸಚಿವ ಡಾ. ಅನಿಲ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.

ಸಂಪೂಜ್ಯಾ ಸ್ವಾಮಿ ಪೂರ್ಣಾಮೃತಾನಂದ ಪುರಿ ಆವರಿಂದ ಸುಶ್ರಾವ್ಯವಾಗಿ ಕೊಳಲನ್ನು ನುಡಿಸುವುದರ ಮೂಲಕ ವಿಶ್ರಾಂತಿ ಕಲೆ ಮತ್ತು ಧ್ಯಾನ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ನಂತರ ವಿದ್ಯಾರ್ಥಿಗಳೊಂದಿಗೆ ಆಧ್ಯಾತ್ಮಿಕ ಜ್ಞಾನ, ವ್ಯಕ್ತಿತ್ವ ವಿಕಸನ ಮತ್ತು ಮಹಿಳಾ ಸಬಲೀಕರಣದ ಕುರಿತು ಸಂವಾದ ನಡೆಸಿದರು.

ಶ್ರೀನಿವಾಸ್ ಯೂನಿವರ್ಸಿಟಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯ ಪ್ರಾಂಶುಪಾಲ ಡಾ. ರಾಮಕೃಷ್ಣ ಎನ್ ಹೆಗಡೆ, ಮಾತಾ ಅಮೃತಾನಂದಮಯಿ ಸೇವಾ ಸಮಿತಿಯ ಗೌರವ ಅಧ್ಯಕ್ಷ ಡಾ. ಜೀವರಾಜ್ ಸೊರಕೆ, ಮಾತಾ ಅಮೃತಾನಂದಮಯಿ ಸೇವಾ ಸಮಿತಿಯ ಅಧ್ಯಕ್ಷ ಸುರೇಶ್ ಅಮೀನ್, ಸೇವಾ ಸಮಿತಿಯ ಪ್ರಮುಖ ಶ್ರುತಿ ಹೆಗ್ಡೆ, ಕೃಷ್ಣ ಶೆಟ್ಟಿ, ಭೋಜರಾಜ್, ದಿನಕರ ಮುಕ್ಕ ಹಾಗೂ ಅಸಂಖ್ಯಾತ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದ ಸಂಚಾಲಕ ಪ್ರೊ. ಕೆ. ಶ್ರೀನಾಥ್ ರಾವ್ ಸ್ವಾಗತಿಸಿದರು, ಜಸ್ಮಿತಾ ನಾಯ್ಕ ಪರಿಚಯಿಸಿದರು. ಪ್ರೊ ಪಿ. ನವೀನ್ ವಂದಿಸಿದರು. ಅನನ್ಯಾ ಎಂ. ಗೌಡ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net