

ಹೊಳೆಹೊನ್ನೂರು: ಸ್ವಗೌರವ, ಸ್ವಜ್ಞಾನ, ಸ್ವನಿಯಂತ್ರಣ ಗುಣಗಳನ್ನು ಹೊಂದಿರುವ ಮನುಷ್ಯನೇ ಸಾರ್ವಭೌಮ ಎಂದು ಮಳಲಿ ಮಠದ ಡಾ. ಶ್ರೀ ಗುರು ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಯಡೇಹಳ್ಳಿ ಜ್ಞಾನಶ್ರೀ ಪಬ್ಲಿಕ್ ಶಾಲೆಯ ಕಲೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆರ್ಶೀವಚನ ನೀಡಿದ ಶ್ರೀಗಳು, ಆಧುನಿಕತೆಯ ಭರಾಟೆಗೆ ಸಿಲುಕಿ ನಮ್ಮ ತನವನ್ನು ಕಳೆದುಕೊಳ್ಳಬಾರದು. ವಿಜ್ಞಾನ, ತಂತ್ರಜ್ಞಾನಗಳನ್ನು ಕಾಲಕ್ಕೆ ತಕ್ಕಂತೆ ಸದ್ಬಳಕೆ ಮಾಡಿಕೊಳ್ಳಬೇಕು. ಭೌತಿಕ ಶಿಕ್ಷಣದೊಂದಿಗೆ ಆಧ್ಯಾತ್ಮಿಕ ಶಿಕ್ಷಣದ ಅವಶ್ಯಕತೆ ಇದೆ. ಪ್ರತಿಯೊಬ್ಬರಿಗೂ ಸಂಸ್ಕಾರ, ಸಂಸ್ಕೃತಿಯ ಅರಿವಿರಬೇಕು. ಗುರು ಹಿರಿಯರಿಗೆ ಗೌರವ ನೀಡುವುದನ್ನು ರೂಢಿಸಿಕೊಳ್ಳಬೇಕು. ಸಂಪತ್ತಿನ ಅಲ್ಪ ಭಾಗವಾದರು ಸಮಾಜಮುಖಿ ಕಾರ್ಯಗಳಿಗೆ ವಿನಿಯೋಗವಾಗಬೇಕು ಎಂದರು.
ಗ್ರಾಪಂ ಮಾಜಿ ಅಧ್ಯಕ್ಷ ಕೆ.ಪಿ.ಕಿರಣ್ ಕುಮಾರ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರತರಲು ಶಿಕ್ಷಕರು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಗ್ರಾಮೀಣ ಪ್ರತಿಭೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರುಗಳಿಸಬೇಕು. ಪಾಲಕರು ರ‌್ಯಾಂಕ್‌ಗಳ ಬೆನ್ನು ಬೀಳದೆ ಮಕ್ಕಳಲ್ಲಿ ಸೃಜನಶೀಲತೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಪ್ರತಿಯೊಬ್ಬ ವಿದ್ಯಾರ್ಥಿಗಳು ಸಹಪಠ್ಯ ಚಟುವಟಿಕೆಗಳಲ್ಲಿ ಭಾಗವಿಸುವಂತೆ ವ್ಯವಸ್ಥೆ ಮಾಡಬೇಕು ಎಂದರು.
ಸಾಧು ಸಮಾಜದ ಅಧ್ಯಕ್ಷ ಎಚ್.ಬಸಪ್ಪ, ಮುಖ್ಯಶಿಕ್ಷಕ ಮಂಜುನಾಥ್, ದೇವರಾಜ್, ಯುವರಾಜ್, ಮೃತ್ಯುಂಜಯಸ್ವಾಮಿ, ಹರೀಶ್, ವಸಂತಾ, ಸುಧಾ, ಗೀತಾ, ಹಾಲಮ್ಮ, ಸರಿತಾ, ನಿವೇದಿತಾ, ಪೂರ್ಣಿಮಾ, ರಮ್ಯಾ ಇತರರಿದ್ದರು.