ಸುಂದರ ಬದುಕಿಗೆ ಆಧ್ಯಾತ್ಮಿಕ ಪ್ರವಚನ ಸಹಕಾರಿ

mm 25-1
Spiritual discourse helps lead to a beautiful life.
Published on

ವಿಜಯಪುರ: ಸುಂದರ ಜೀವನ ರೂಪಿಸಿಕೊಳ್ಳಬೇಕಾದರೆ ಆಧ್ಯಾತ್ಮಿಕ ಪ್ರವಚನ ಆಲಿಸಬೇಕೆಂದು ಷಣ್ಮುಖಾರೂಢ ಮಠದ ಅಭಿನವ ಸಿದ್ಧಾರೂಢ ಶ್ರೀಗಳು ಹೇಳಿದರು.

ಇಲ್ಲಿನ ಆನಂದ ನಗರದ ಶ್ರೀ ದಾನಮ್ಮದೇವಿ ದೇವಸ್ಥಾನದ ೧೫ನೇ ಜಾತ್ರಾ ಮಹೋತ್ಸವ ಅಂಗವಾಗಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಪ್ರವಚನ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಅಶೀರ್ವಚನ ನೀಡಿದರು.

ಮನುಷ್ಯನ ಜೀವನ ಬಿಳಿಹಾಳೆಯಂತೆ. ತಿಳಿದವನು ಅದರ ಮೇಲೆ ಕಥೆ, ಕಾದಂಬರಿ ಬರೆದು ಸಾಹಿತಿ, ಶಿಕ್ಷಕನಾಗುತ್ತಾನೆ. ತಿಳಿಯದೆ ಇರುವವನು ಪೇಪರ್ ಹರಿದು ಮುದ್ದೆಮಾಡಿ ಮೂಲೆಗೆ ಎಸೆಯುತ್ತಾನೆ. ಅದೇ ಜನ ಬುದ್ಧಿಜೀವಿಗಳ ಸಾಮಿಪ್ಯದಲ್ಲಿ ಬಂದರೆ ಪ್ರವಚನ ಆಲಿಸಿದ್ದಲ್ಲಿ ಅವರಲ್ಲಿ ಭಕ್ತಿಯ ಕಾವ್ಯವಾಗಿ ರೂಪಗೊಳ್ಳುತ್ತದೆ ಎಂದರು.

ಮುಖ್ಯ ಪ್ರವಚನಕಾರ, ಪ್ರಖರ ವಾಗ್ಮಿ ಮಣಕವಾಡದ ಅಭಿನವ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಜೀವನ ದರ್ಶನ ಎನ್ನುವುದು ಪ್ರತಿನಿತ್ಯ ನಾವು ಬದುಕುವ ಜೀವನ ಯಾವ ರೀತಿ ಇರಬೇಕು. ನಮ್ಮ ನಡೆ ನುಡಿ ಹೇಗಿರಬೇಕು. ಸುಂದರವಾದ ಬದುಕು ರೂಪಿಸಲಿಕ್ಕೆ ನಾವು ಏನು ಮಾಡಬೇಕು ಎನ್ನುವುದು ಜೀವನ ದರ್ಶನದ ಪ್ರವಚನದ ಸಾರ ಎಂದು ಆಶೀರ್ವಚನ ನೀಡಿದರು.

ಪಾಲಿಕೆ ಮೇಯರ್ ಎಂ.ಎಸ್. ಕರಡಿ ಕಾರ್ಯಕ್ರಮ ಉದ್ಘಾಟಿಸಿದರು. ತೆಲಸಂಗದ ವೀರೇಶ್ವರ ಸ್ವಾಮೀಜಿ, ಷಣ್ಮುಖಾರೂಢ ಮಠದ ಸಚ್ಚಿದಾನಂದ ಶ್ರೀಗಳು ಹಾಗೂ ಸಚಿನ ಶ್ರೀಗಳು ವೇದಿಕೆಯಲ್ಲಿದ್ದರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ವಿ.ಸಿ. ನಾಗಠಾಣ ಅಧ್ಯಕ್ಷತೆ ವಹಿಸಿದ್ದರು. ದೇವಸ್ಥಾನದ ಅಧ್ಯಕ್ಷ ಅಪ್ಪು ಇಟ್ಟಂಗಿ, ಉಪಾಧ್ಯಕ್ಷ ಎಂ.ಬಿ. ಮೂಲಿಮನಿ ಉಪಸ್ಥಿತಿ ವಹಿಸಿದ್ದರು. ಎಚ್.ಎಂ. ಬೋರಾವತ ಸ್ವಾಗತಿಸಿದರು. ಬಸವರಾಜ ಮರನೂರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net