ಅಧ್ಯಾತ್ಮ ಸಾಧನೆಯೇ ಪೂರ್ಣ ವ್ಯಕ್ತಿತ್ವ: ಡಾ. ನಿರಂಜನ್ ವಾನಳ್ಳಿ

9
Published on

ಮೈಸೂರು: ಸಾಮಾನ್ಯ ವ್ಯಕ್ತಿಯೊಬ್ಬ ಏನು ಮಾಡಲು ಸಾಧ್ಯವೋ ಅದೆಲ್ಲವನ್ನೂ ಶ್ರೀಕೃಷ್ಣನ ಬದುಕು ನಮಗೆ ಅರ್ಥ ಮಾಡಿಸುತ್ತದೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ (ಉತ್ತರ) ಕುಲಪತಿ ಡಾ. ನಿರಂಜನ್ ವಾನಳ್ಳಿ ಹೇಳಿದರು.

ಗಾನಭಾರತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಕುವೆಂಪುನಗರದ ವೀಣೆಶೇಷಣ್ಣ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಶ್ರೀಕೃಷ್ಣ ಜಯಂತಿ ಉದ್ಘಾಟಿಸಿ ಮಾತನಾಡಿದರು.

ನಮ್ಮ ಜೀವನದ ಎಲ್ಲ ಆಯಾಮಗಳಲ್ಲೂ ಅಧ್ಯಾತ್ಮವನ್ನು ಸಾಧಿಸಬಲ್ಲವನ ವ್ಯಕ್ತಿತ್ವವೇ ಪೂರ್ಣವ್ಯಕ್ತಿತ್ವ. ಕೃಷ್ಣನಷ್ಟು ನಮ್ಮಲ್ಲಿ ಒಂದಾಗಿ ಬೆರೆಯಬಲ್ಲ ದೈವ ಇನ್ನೊಬ್ಬನಿಲ್ಲ. ಸಾಮಾನ್ಯ ವ್ಯಕ್ತಿಯೊಬ್ಬ ಏನು ಮಾಡಲು ಸಾಧ್ಯವೋ ಅದೆಲ್ಲವನ್ನೂ ಶ್ರೀಕೃಷ್ಣನ ಬದುಕು ಅರ್ಥ ಮಾಡಿಸುತ್ತದೆ ಎಂದರು.

ಧರ್ಮ, ಕೋಮುವಾದ ಎಲ್ಲವನ್ನೂ ಬದಿಗೊತ್ತಿ ಬದುಕು ಕಟ್ಟಿಕೊಳ್ಳುವುದನ್ನು ಕೃಷ್ಣನ ಜೀವನ ನಮಗೆ ನಿದರ್ಶನವಾಗಿದೆ. ಎಲ್ಲ ರೀತಿಯ ಜೀವನ ಅನುಕರಿಸಲು-ಅನುಸರಣೆ ಮಾಡಲು ಕೃಷ್ಣನ ಬದುಕು ಜೀವಂತ ಸಾಕ್ಷಿಯಾಗಿದೆ ಎಂದು ಹೇಳಿದರು

ಕಳೆದ ನಾಲ್ಕು ದಶಕದಿಂದ ಗಾನಭಾರತಿ ಜತೆ ಒಡನಾಟ ಹೊಂದಿದ್ದು ನಾನು ಕೂಡ ಸಭಿಕರಂತೆ ಗೀತೆಗಳನ್ನು ಆಲಿಸಿದ್ದು, ಇದೇ ವೇದಿಕೆಯಲ್ಲಿ ಅತಿಥಿಯಾಗಿ ಭಾಗಿಯಾಗಿರುವುದು ಸಂತೋಷವಾಗುತ್ತಿದೆ ಎಂದರು.

ನಾನು ಕುಲಪತಿಯಾಗಿ ಕರ್ತವ್ಯ ನಿರ್ವಹಿಸುವಾಗ ಪ್ರತಿವರ್ಷ ವಿಶ್ವವಿದ್ಯಾಲಯಗಳಿಂದ ಅರ್ಹರಿಗೆ ಗೌರವ ಡಾಕ್ಟರೇಟ್ ನೀಡುವುದು ವಾಡಿಕೆಯಾಗಿದೆ. ಹೀಗಾಗಿ ಒಬ್ಬ ಹಿರಿಯ ಅರ್ಹ ಕಲಾವಿದರೊಬ್ಬರಿಗೆ ಗೌರವ ಡಾಕ್ಟರೇಟ್ ಪದವಿ ಸಿಗುವಂತೆ 4 ಬಾರಿ ಪಟ್ಟಿ ಮಾಡಿ ಕಳುಹಿಸಲಾಗಿತ್ತು. ಆದರೂ ಸಹ ಬಿಡುಗಡೆಗೊಂಡ ಪಟ್ಟಿಯಲ್ಲಿ ಇದ್ದ ವ್ಯಕ್ತಿಯೇ ಬೇರೆಯಾಗಿದ್ದು, ಅವರಿಗೆ ಕೊಡಿಸುವುದಕ್ಕೆ ಆಗಲಿಲ್ಲ ಎಂದು ಕಲಾವಿದರ ಹೆಸರೇಳದೆ ಅಸಮಾಧಾನ ವ್ಯಕ್ತಪಡಿಸಿದರು.

ಯಾವಾಗಲೂ ಸಂಗೀತ, ನಾಟಕ ಕಾರ್ಯಕ್ರಮಕ್ಕೆ ಹಳೇ ತಲೆಮಾರಿನವರು ತುಂಬಿ ತುಳುಕಾಡುತ್ತಿದ್ದು, ಇಂದಿನ ತಲೆಮಾರಿನಲ್ಲಿ ಅವರ ಸಂಖ್ಯೆ ಕಡಿಮೆ ಆಗುತ್ತಿದೆ. ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ ಕಣ್ಮರೆಯಾಗುವ ಹಂತದಲ್ಲಿದ್ದು ಅದನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ಇವುಗಳ ಬಗ್ಗೆ ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು.

ಗಾನಭಾರತಿ ಮಹಾಪೋಷಕ ಡಾ.ಸಿ.ಜಿ. ನರಸಿಂಹನ್ ಮಾತನಾಡಿ, ಯಾವುದೇ ವಿಚಾರದಲ್ಲಿಯೂ ಪ್ರತಿಫಲ ಸಿಗಬೇಕಾದರೆ ನಡವಳಿಕೆ ಮುಖ್ಯವಾಗುತ್ತದೆ. ನಮಗೆ ತಂದೆ, ತಾಯಿಯೇ ದೇವರು ಎಂಬುದನ್ನು ಅರ್ಥ ಮಾಡಿಕೊಂಡಾಗ ಮಾತ್ರ ಶ್ರೀಕೃಷ್ಣನ ಜೀವನಾದರ್ಶ ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಲು ಸಾಧ್ಯ ಎಂದರು.

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶಾಸ್ತ್ರೀಯ ಸಂಗೀತ ಕ್ಷೇತ್ರದ ಗಾಯಕರಾದ ವಿದುಷಿ ಎಂ.ಎಸ್.ಶೀಲಾ, ಸಂಗೀತ ವಿದ್ವಾಂಸ ಸಿ.ಎ. ಶ್ರೀಧರ, ರಂಗ ತಜ್ಞ ಪ್ರೊ. ಎಚ್.ಎಸ್.ಉಮೇಶ್ ಅವರನ್ನು ಗೌರವಿಸಲಾಯಿತು.

ಗಾನ ಭಾರತೀ ಅಧ್ಯಕ್ಷ ಎಚ್.ಆರ್.ಸುಂದರೇಶನ್ ಇತರರು ಇದ್ದರು.ವಿದುಷಿ ಕೃಪಾ ಫಡ್ಕೆ, ಮತ್ತು ವಿದುಷಿ ಪೂಜ ಸುಗಮ್ ಇವರಿಂದ ಭರತನಾಟ್ಯ ಪ್ರಸ್ತುತಪಡಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net