ಬದುಕಿನ ವಿಕಾಸಕ್ಕೆ ಆಧ್ಯಾತ್ಮ ಸಾಧನೆ ಮುಖ್ಯ

ಆಲೂರು ತಾಲೂಕಿನ ಕುಂದೂರು ಹೋಬಳಿ ವ್ಯಾಪ್ತಿಯ ಮೇರ್ವೆ ಗ್ರಾಮದಲ್ಲಿ ಭಾನುವಾರ ನಡೆದ ಮನೆ ಮನೆಗೆ ರೇಣುಕ-ಮನ ಮನಕೆ ರೇಣುಕರ ಸಿದ್ಧಾಂತ ಶಿಖಾಮಣಿ ತತ್ತ್ವ ಪ್ರಚಾರ ಅಭಿಯಾನ ಕಾರ್ಯಕ್ರಮದಲ್ಲಿ ಶ್ರೀ ಷ.ಬ್ರ. ಸದಾಶಿವ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಭಾಗ್ಯಾ ಮಂಜುನಾಥ್, ಪದ್ಮಾ ರೇಣುಕಾ, ಮದನ್, ತೇಜಸ್ವಿನಿ, ದಿಲೀಪ್, ಹಾಸನ ದೇವರಾಜ್ ಶಾಸ್ತ್ರಿ, ಪುರೋಹಿತ ಶಶಿ ವಿರುಪಾಪುರ, ರವಿ ಭಾವಸುವಳ್ಳಿ ಇತರರಿದ್ದರು.
ಆಲೂರು ತಾಲೂಕಿನ ಕುಂದೂರು ಹೋಬಳಿ ವ್ಯಾಪ್ತಿಯ ಮೇರ್ವೆ ಗ್ರಾಮದಲ್ಲಿ ಭಾನುವಾರ ನಡೆದ ಮನೆ ಮನೆಗೆ ರೇಣುಕ-ಮನ ಮನಕೆ ರೇಣುಕರ ಸಿದ್ಧಾಂತ ಶಿಖಾಮಣಿ ತತ್ತ್ವ ಪ್ರಚಾರ ಅಭಿಯಾನ ಕಾರ್ಯಕ್ರಮದಲ್ಲಿ ಶ್ರೀ ಷ.ಬ್ರ. ಸದಾಶಿವ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಭಾಗ್ಯಾ ಮಂಜುನಾಥ್, ಪದ್ಮಾ ರೇಣುಕಾ, ಮದನ್, ತೇಜಸ್ವಿನಿ, ದಿಲೀಪ್, ಹಾಸನ ದೇವರಾಜ್ ಶಾಸ್ತ್ರಿ, ಪುರೋಹಿತ ಶಶಿ ವಿರುಪಾಪುರ, ರವಿ ಭಾವಸುವಳ್ಳಿ ಇತರರಿದ್ದರು.
Published on

ಆಲೂರು: ಬದುಕು ವಿಕಾಸಗೊಳ್ಳಲು ಅಧ್ಯಾತ್ಮದ ಸಾಧನೆ ಬಹಳ ಮುಖ್ಯ ಎಂದು ಶ್ರೀಮದ್ ರಂಭಾಪುರಿ ವೀರಸಿಂಹಾಸನ ಶಾಖಾ ಶ್ರೀ ಸಂಸ್ಥಾನ ಹಿರೇಮಠದ ಪೀಠಾಧ್ಯಕ್ಷ ಶ್ರೀ ಷ.ಬ್ರ. ಸದಾಶಿವ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಆಲೂರು ತಾಲೂಕಿನ ಕುಂದೂರು ಹೋಬಳಿ ವ್ಯಾಪ್ತಿಯ ಮೇರ್ವೆ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಮನೆ ಮನೆಗೆ ರೇಣುಕ-ಮನ ಮನಕೆ ರೇಣುಕರ ಸಿದ್ಧಾಂತ ಶಿಖಾಮಣಿ ತತ್ತ್ವ ಪ್ರಚಾರ ಅಭಿಯಾನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ವ್ಯಕ್ತಿಯ ತಿಳಿವಳಿಕೆಗಿಂತ ನಡವಳಿಕೆ ಶ್ರೇಷ್ಠವಾಗಿದ್ದು, ತಿಳಿವಳಿಕೆ ಸೋಲಬಹುದು. ಆದರೆ ನಡವಳಿಕೆ ಎಂದಿಗೂ ಸೋಲಲ್ಲ ಎಂದರು.

ಶ್ರೀ ರೇಣುಕಚಾರ್ಯರು ಸಾಮಾನ್ಯರಲ್ಲ. ಅಸಾಮಾನ್ಯ ಘನ ವ್ಯಕ್ತಿತ್ವ ಹೊಂದಿದ ಸಕಲ ಸಮುದಾಯಗಳ ಹಿತವನ್ನು ಬಯಸಿದವರು. ಅಲ್ಲದೆ ಜನಸಮುದಾಯದಲ್ಲಿ ಧಾರ್ಮಿಕ - ಸಾಮಾಜಿಕ ಸತ್ಕಾಂತಿಗೈದ ಪರಮಾಚಾರ್ಯರು. ಕೊಲನುಪಾಕ ಸ್ವಯಂಭೂ ಶ್ರೀ ಸೋಮೇಶ್ವರ ಸುಕ್ಷೇತ್ರದಲ್ಲಿ ಹದಿನೆಂಟು ಜಾತಿ, ಜನಾಂಗಗಳ ಧಾರ್ಮಿಕ ಕೇಂದ್ರಗಳನ್ನು ಹುಟ್ಟುಹಾಕಿ ಸಂಸ್ಕಾರ - ಸಂಸ್ಕೃತಿ ಅರುಹಿದ ಯುಗಪುರುಷರು. ಪುರುಷರಂತೆ ಮಹಿಳೆಯರಿಗೂ ಧಾರ್ಮಿಕ ಸ್ವಾತಂತ್ರ್ಯ ತಂದುಕೊಟ್ಟ ಪ್ರಥಮಾಚಾರ್ಯರು. ಕಾಯಕ ಮತ್ತು ದಾಸೋಹ ಭಾವನೆ ಮೂಲಕ ಕ್ರಿಯಾತ್ಮಕ ಬದುಕಿಗೆ ಕರೆಕೊಟ್ಟವರು ಎಂದು ಬಣ್ಣಿಸಿದರು.

ಶ್ರೀ ರೇಣುಕರು ಅನುಗ್ರಹಿಸಿದ ಶಿವಾನ್ವಿತ ಸಿದ್ಧಾಂತ ಸಾರವೇ ವೀರಶೈವ ಧರ್ಮದ ಶ್ರೇಷ್ಠ ಗ್ರಂಥ ಶ್ರೀ ಸಿದ್ಧಾಂತ ಶಿಖಾಮಣಿಯಾಗಿದೆ. ಶ್ರೀ ಶಿವಯೋಗಿ ಶಿವಾಚಾರ್ಯರಿಂದ ವಿರಚಿತವಾದ ಈ ಪವಿತ್ರ ಗ್ರಂಥವು ವೀರಶೈವ ಸಿದ್ಧಾಂತವನ್ನು ಪ್ರತಿಪಾದಿಸಿದ ಪ್ರಥಮ ಗ್ರಂಥವಾಗಿದೆ. ಕ್ರಿ.ಶ.1060 ರಲ್ಲಿ ರಚಿತವಾದ ಶ್ರೀಪತಿ ಪಂಡಿತರ ಶ್ರೀಕರ ಭಾಷ್ಯದಲ್ಲಿ ಈ ಗ್ರಂಥದ ಉಲ್ಲೇಖವಿದ್ದು, ಇದರಲ್ಲಿ ಜೀವನ ದರ್ಶನದ ಹೆಜ್ಜೆಗಳನ್ನು ಇಂದಿಗೂ ಕಾಣಬಹುದು. ವೀರಶೈವ ಧರ್ಮ ಅತ್ಯಂತ ಪ್ರಾಚೀನ. ಇದರ ಇತಿಹಾಸ ಮತ್ತು ಪರಂಪರೆ ಅಪೂರ್ವ - ಅಮೋಘ. ಕಾಯಕ ಮತ್ತು ದಾಸೋಹ ಭಾವನೆಗಳನ್ನು ಬೆಳೆಸಿದ ಶ್ರೇಯಸ್ಸು ವೀರಶೈವ ಧರ್ಮಕ್ಕಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಗ್ರಾಮದ ಭಾಗ್ಯಾ ಮಂಜುನಾಥ್ ಕುಟುಂಬ ವರ್ಗದವರಿಂದ ಶ್ರೀಗಳ ಪಾದಪೂಜೆ ಕಾರ್ಯಕ್ರಮ ನೆರವೇರಿತು. ನಂತರ ನೆರೆದಿದ್ದ ಭಕ್ತರಿಗೆ ಅನ್ನ ಸಂತರ್ಪಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಗ್ರಾಮಸ್ಥರಾದ ಪದ್ಮಾ ರೇಣುಕಾ, ಮದನ್, ತೇಜಸ್ವಿನಿ, ದಿಲೀಪ್, ಹಾಸನ ದೇವರಾಜ್ ಶಾಸ್ತ್ರಿ, ಪುರೋಹಿತ ಶಶಿ ವಿರುಪಾಪುರ, ರವಿ ಭಾವಸುವಳ್ಳಿ ಸೇರಿದಂತೆ ಮುಂತಾದವರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net