15 ರಂದು ಸ್ಪಿರಿಟ್ ಆಫ್ ಫ್ರೀಡಂ ರನ್

running
Published on

ಗೋಣಿಕೊಪ್ಪಲು: ಸ್ವಾತಂತ್ರೃ ದಿನದಂದು ಪೊನ್ನಂಪೇಟೆಯಿಂದ ಗೋಣಿಕೊಪ್ಪದವರೆಗೆ ಸ್ಪಿರಿಟ್ ಆಫ್ ಫ್ರೀಡಂ ರನ್ ಆಯೋಜಿಸಲಾಗಿದೆ ಎಂದು ಗೋಣಿಕೊಪ್ಪ ಲಯನ್ಸ್ ಕ್ಲಬ್ ಅಧ್ಯಕ್ಷ ಚೆಪ್ಪುಡೀರ ಪಿ.ಬೋಪಣ್ಣ ತಿಳಿಸಿದರು.

43ನೇ ವರ್ಷದ ಕಾರ್ಯಕ್ರಮ ಇದಾಗಿದ್ದು, ಎಲ್ಲ ವಯೋಮಾನದವರಿಗೂ ಅವಕಾಶ ನೀಡಲಾಗಿದೆ. ಆ.15 ರಂದು ಬೆಳಗ್ಗೆ 6.30 ಕ್ಕೆ ಪೊನ್ನಂಪೇಟೆ ಬಸವೇಶ್ವರ ದೇವಸ್ಥಾನ ಎದುರು ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಬೆಳಗ್ಗೆ 6.15 ಕ್ಕೆ ಸ್ಪರ್ಧಿಗಳು ಜಮಾಯಿಸಬೇಕಿದ್ದು, ನೋಂದಣಿ ಇಲ್ಲದೆ ನೇರವಾಗಿ ಸ್ಪರ್ಧಿಸಲು ಅವಕಾಶವಿದೆ. ಗೋಣಿಕೊಪ್ಪ ಉಮಾಮಹೇಶ್ವರಿ ಪೆಟ್ರೋಲ್ ಬಂಕ್ ಆವರಣದಲ್ಲಿ ಓಟ ಕೊನೆಗೊಳ್ಳಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

4-7, 8-10 ನೇ ತರಗತಿಯ ಬಾಲಕ-ಬಾಲಕಿಯರು, ಕಾಲೇಜು ಮತ್ತು ಸಾರ್ವಜನಿಕ ಪುರುಷ ಮತ್ತು ಮಹಿಳೆಯರು ಹಾಗೂ 60 ವರ್ಷ ಮೇಲ್ಪಟ್ಟ ಹಿರಿಯರಿಗೂ ಕೂಡ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.

ಕಾರ್ಯದರ್ಶಿ ಮನ್ನಕಮನೆ ಸೌಮ್ಯಾ ಬಾಲು ಮಾತನಾಡಿ, ಕೊಡಗು ಎಜುಕೇಷನಲ್ ಮತ್ತು ಸೋಷಿಯಲ್ ಸರ್ವಿಸ್ ಸಂಸ್ಥೆ, ಕೊಡಗು ಡಿಸಿಸಿ ಬ್ಯಾಂಕ್, ಬರೋಡಾ ಬ್ಯಾಂಕ್, ಕೆನರಾ ಬ್ಯಾಂಕ್, ಟೌನ್ ಕೋ ಆಪರೇಟಿವ್ ಬ್ಯಾಂಕ್ ಸಹಕಾರದಲ್ಲಿ ನಡೆಯುತ್ತಿದ್ದು, ಪ್ರತಿ ಸ್ಪರ್ಧಿಗೆ 50 ರೂ. ಪ್ರಯಾಣ ವೆಚ್ಚ ನೀಡಲಾಗುವುದು. ಲೋಪಮುದ್ರ ಮೆಡಿಕಲ್ ಸೆಂಟರ್ ವತಿಯಿಂದ ಆಂಬುಲೆನ್ಸ್ ಸೇವೆ, ಉದ್ಯಮಿ ಕೊಲ್ಲೀರ ಗಯಾ ಕಾವೇರಪ್ಪ ಅವರು ಉಪಾಹಾರದ ವ್ಯವಸ್ಥೆ ಮಾಡಿದ್ದಾರೆ ಎಂದು ತಿಳಿಸಿದರು.

ಲಯನ್ಸ್ ಚಾರಿಟಬಲ್ ಟ್ರಸ್ಟ್ ಮುಖ್ಯಸ್ಥ ಪಟ್ಟಡ ಧನು ಉತ್ತಯ್ಯ ಮಾತನಾಡಿ, ಲಯನ್ಸ್ ಕ್ಲಬ್ 42 ವರ್ಷಗಳಿಂದ ಸ್ಪರ್ಧಿಗಳು ಉಚಿತವಾಗಿ ಪಾಲ್ಗೊಳ್ಳಲು ಅವಕಾಶ ನೀಡುತ್ತಿದೆ. ಪ್ರಯಾಣ ವೆಚ್ಚ, ಬೆಳಗ್ಗಿನ ಉಪಾಹಾರ ಕೂಡ ನೀಡುತ್ತಿರುವುದರಿಂದ ಹೆಚ್ಚು ಪ್ರೋತ್ಸಾಹ ಸಿಗುತ್ತಿದೆ ಎಂದು ತಿಳಿಸಿದರು.

ಖಜಾಂಚಿ ಐನಂಡ ಎಂ. ಸೋಮಣ್ಣ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net