ಸ್ಪಿಕ್​ ಮೆಕೆ ಪ್ರಾದೇಶಿಕ ಸಮಾವೇಶ

WEB LOGO
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಸ್ಪಿಕ್​ ಮೆಕೆ ವತಿಯಿಂದ ನಗರದ ಐಐಟಿ ಕ್ಯಾಂಪಸ್​ನಲ್ಲಿ ಅ. 14ರಿಂದ ಸ್ಪಿಕ್​ ಮೆಕೆ ಪ್ರಾದೇಶಿಕ ಸಮಾವೇಶ ಆಯೋಜಿಸಿದ್ದು, ಅ. 20ರವರೆಗೆ ನಡೆಯಲಿದೆ ಎಂದು ಸ್ಪಿಕ್​ ಮೆಕೆ ಸಾರ್ವಜನಿಕ ಸಂಪರ್ಕಾಧಿಕಾರಿ ವಿಜಯ ತ್ರಾಸದ ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಸಮಾವೇಶ ಆರಂಭವಾಗಿದ್ದು, ಅ. 17ರಂದು ಸಂಜೆ 6.45ಕ್ಕೆ ಉದ್ಘಾಟನೆ ಸಮಾರಂಭ ನಡೆಯಲಿದ್ದು, ಜಿಲ್ಲಾಧಿಕಾರಿ ದಿವ್ಯ ಪ್ರಭು ಸೇರಿ ಇತರ ಗಣ್ಯರು ಆಗಮಿಸಲಿದ್ದಾರೆ ಎಂದರು.
ನಿತ್ಯ ಬೆಳಗ್ಗೆ ನಾದ ಯೋಗ, ಹಟಯೋಗ, ಕಾರ್ಯಾಗಾರಗಳು, ಪಾರಂಪರಿಕ ಸಿನೆಮಾ, ಜನಪದ ಪ್ರದರ್ಶನ, ಸಂಗೀತ, ಭರತನಾಟ್ಯ ಪ್ರದರ್ಶನಗಳು ನಡೆಯಲಿವೆ. ಅ. 16ರಂದು ಸಂಜೆ 6 ಗಂಟೆಗೆ ನೆರಳು ಬೊಂಬೆಯಾಟ, ಅ. 17ರಂದು ಬೆಳಗ್ಗೆ 10 ಗಂಟೆಗೆ ಉಸ್ತಾದ್​ ಶಫೀಕ್​ ಖಾನ್​ ಸಿತಾರ ಕಚೇರಿ, ಸಂಜೆ 7 ಗಂಟೆಗೆ ವಿದ್ವಾನ್​ ಆರ್​.ಎನ್​. ತ್ಯಾಗರಾಜ್​ ಅವರಿಂದ ಸಂಗೀತ, ಅ. 18ರಂದು ಮಧ್ಯಾಹ್ನ 2 ಗಂಟೆಗೆ ಲಾರ್ಸ್​ ಮುಲ್ಲರ ಅವರಿಂದ ಸ್ಯಾಕ್ಸೋಫೋನ್ ಹಾಗೂ ಜಾಝ್​ ಸಂಗೀತ ಕಚೇರಿ, ಸಂಜೆ 4 ಗಂಟೆಗೆ ಪಂ. ಕೈವಲ್ಯಕುಮಾರ ಗುರವ ಅವರಿಂದ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು.
ಅ. 19ರಂದು ಮಧ್ಯಾಹ್ನ 1 ಗಂಟೆಗೆ ವಿದ್ಯಾರ್ಥಿಗಳ ಕಲಾ ಪ್ರದರ್ಶನ, ಮಧ್ಯಾಹ್ನ 2.30ಕ್ಕೆ ಗಿರೀಶ ಕಾಸರವಳ್ಳಿ ಅವರ ದ್ವೀಪ ಸಿನೆಮಾ ಪ್ರದರ್ಶನ ನಂತರ ವಿದುಷಿ ಲೀಲಾ ಸ್ಯಾಮ್ಸನ್​ ಅವರಿಂದ ಭರತನಾಟ್ಯ ಪ್ರದರ್ಶನ ನಡೆಯಲಿದೆ. ಅ. 10ರಂದು ಸಂಜೆ 5 ಗಂಟೆಗೆ ಪ್ರಾರಂಪರಿಕ ಸ್ಥಳಗಳ ವೀಕ್ಷಣೆ ಏರ್ಪಡಿಸಲಾಗಿದೆ ಎಂದರು.
ಐಐಟಿ ನಿರ್ದೇಶಕ ಪ್ರೊ. ವೆಂಕಪ್ಪಯ್ಯ ದೇಸಾಯಿ ಮಾತನಾಡಿ, ಈಗಾಗಲೇ ಆರಂಭವಾದ ಸಮಾವೇಶದಲ್ಲಿ ಮೇಕಿಂಗ್​ ಆಫ್ ಮಹಾತ್ಮ ಗಾಂಧಿ ಸಿನೆಮಾ ಪ್ರದರ್ಶನ, ನಟ ರಜಿತ್​ ಕಪೂರ್​ ಜತೆಗೆ ಸಂವಾದ ನಡೆಸಲಾಗಿದೆ. ಭಾರತೀಯ ಪರಂಪರೆಯ ವಿವಿಧ ಅಂಶಗಳ ಬಗ್ಗೆ ಜಾಗೃತಿ ಹೆಚ್ಚಿಸುವುದರ ಜತೆಗೆ ಯುವ ಜನತೆಯಲ್ಲಿ ಮೌಲ್ಯಗಳನ್ನು ಬಿತ್ತುವುದೇ ಸ್ಪಿಕ್​ ಮೆಕೆ ಉದ್ದೇಶ ಎಂದರು.
ಪ್ರೊ. ಸೂರ್ಯಪ್ರಕಾಶ ಆರ್​., ರಜಿತ್​ ಕಪೂರ, ಎಸ್​.ಎಂ. ಶಿವಪ್ರಸಾದ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net