

ಮಹಾಲಿಂಗಪುರ: ಯಾವುದೇ ಉದ್ಯಮಿಗಳು ಬರೀ ಲಾಭ ಆಸೆಯಿಂದ ಇಟ್ಟುಕೊಳ್ಳದೆ ಲಾಭದಲ್ಲಿ ಬರುವ ಹಣವನ್ನು ಒಳ್ಳೆಯ ಕಾರ್ಯಗಳಿಗೆ ವಿನಿಯೋಗಿಸಿದಾಗ ಮಾತ್ರ ಅದಕ್ಕೆ ಒಂದು ಅರ್ಥ ಬರುತ್ತದೆ ಎಂದು ಗೋದಾವರಿ ಬಯೋರಿಫೈನರೀಜ್ ಸಿಎಂಡಿ ಸಮೀರ ಸೋಮೈಯಾ ಹೇಳಿದರು.
ಸಮೀಪದ ಸೈದಾಪೂರ-ಸಮೀರವಾಡಿಯ ಕೆ.ಜೆ. ಸೋಮಯ್ಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶಿಕ್ಷಣ ನೀಡುವುದರಿಂದ ಬರುವ ಪುಣ್ಯ ಬೇರಾವ ಕಾರ್ಯಗಳಿಂದ ಬರಲ್ಲ. ಮಕ್ಕಳಿಗೆ ಶಿಕ್ಷಣ ಕಲಿಸುವುದರಿಂದ ದೇಶದ ಭದ್ರತೆಯಲ್ಲಿ ನಾವೂ ಸಕ್ರೀಯ ಪಾತ್ರ ವಹಿಸಿದಂತೆ ಎಂದರು.
ಜಮಖಂಡಿ ವಿಭಾಗಾಧಿಕಾರಿ ಶ್ವೇತಾ ಬೀಡಿಕರ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಇಷ್ಟೊಂದು ಉನ್ನತ ಮಟ್ಟದ ಶಿಕ್ಷಣ ನೀಡುತ್ತಿರುವ ಸೋಮಯ್ಯ ಗ್ರೂಪ್‌ನ ಕಾರ್ಯ ಶ್ಲಾಘನೀಯ. ಶಾಲೆಗಳಲ್ಲಿ ಹೇಳಿಕೊಡುತ್ತಿರುವ ಸಂಸ್ಕಾರದ ಪಾಠವನ್ನು ಮಕ್ಕಳು ಸರಿಯಾಗಿ ಪಾಲಿಸುವಂತೆ ಮಾಡುವ ಮಹತ್ತರ ಜವಾಬ್ದಾರಿ ಪಾಲಕರದ್ದಾಗಿದೆ ಎಂದು ತಿಳಿಸಿದರು.
ಗೋದಾವರಿ ಬಯೋರಿೈನರೀಜ್‌ನ ಕಾರ್ಯನಿರ್ವಾಹಕ ನಿರ್ದೇಶಕ ಬಾಲಚಂದ್ರ ಭಕ್ಷಿ, ಡಾ. ಲಾರಿ ವಾಕರ್, ಡಾ. ಲೀಸಾ ತೀಮನ್, ಶಾಲೆಯ ಕೋ ಆರ್ಡಿನೇಟರ್ ಅಶ್ವಿನಿ ಶೆಲ್ಕೆ, ಪ್ರಾಚಾರ್ಯ ಅನೀಲಕುಮಾರ ಸಿ.,ವಿಕ್ರಂ ದೊಡ್ಡಗೌಡರ, ತಬಸುಮ್ ಘೋರಿ, ಸುಲಭಾ ಸೊನ್ನದ, ದಿವ್ಯಾ ಬೀಸೆ, ಸುರೇಶ ಬಾಡಗಿ, ಸುನಂದಾ ಚನಗೌಡ, ರವಿ ಕೌಜಲಗಿ, ರವಿಂದ್ರ ಶೆಟ್ಟರ ಇತರರಿದ್ದರು.