

ಕಾರವಾರ: ಎನ್‌ಎಚ್‌ಎಐ ಸುರಕ್ಷತಾ ಪ್ರಮಾಣಪತ್ರ ಪಡೆದ ನಂತರ ಅಂಕೋಲಾ-ಕುಮಟಾ ನಡುವೆ ಕಳೆದ 12 ದಿನಗಳಿಂದ ಬಂದ್ ಆಗಿರುವ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ವಾಹನ ಸಂಚಾರವನ್ನು ಶೀಘ್ರದಲ್ಲಿ ಪುನರಾರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ತಿಳಿಸಿದ್ದಾರೆ.
ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ಅವರು ಶಿರೂರು ಕಾರ್ಯಾಚರಣೆಯ ಬೆಳವಣಿಗೆಗಳ ಮಾಹಿತಿ ನೀಡಿದರು. ಜಿಯಾಲಜಿಕಲ್ ಸರ್ವೇ ಆಫ್ ಇಂಡಿಯಾದ ತಜ್ಞರು ಭೇಟಿ ನೀಡಿ, ರಾಷ್ಟ್ರೀಯ ಹೆದ್ದಾರಿ 66 ರಲ್ಲಿರುವ ಅಪಾಯಕಾರಿ ಸ್ಥಳಗಳ ವಿವರಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸಲ್ಲಿಸಲಾಗಿತ್ತು. ಆ ಎಲ್ಲ ಸ್ಥಳಗಳ ಹಾಗೂ ಶಿರೂರಿನಲ್ಲಿ ತುರ್ತಾಗಿ ಕೈಗೊಳ್ಳಬೇಕಾಗಿರುವ ಸುರಕ್ಷತಾ ಕ್ರಮಗಳ ಬಗ್ಗೆ ಕ್ರಮ ವಹಿಸುಂತೆ ಸೂಚಿಸಲಾಗಿದೆ. ಅವರು ಕಾಮಗಾರಿ ಕೈಗೊಂಡು ಸುರಕ್ಷತಾ ಪ್ರಮಾಣಪತ್ರ ನೀಡಿದ ನಂತರ ಮಾತ್ರ ವಾಹನಗಳ ಓಡಾಟಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ತಿಳಿಸಿದರು.
ತೇಲುವ ಜಟ್ಟಿ ತರಿಸುವ ಯತ್ನ:
ಅಂಕೋಲಾ ಶಿರೂರು ಗುಡ್ಡ ಕುಸಿತದಲ್ಲಿ ನಾಪತ್ತೆಯಾದ ಟ್ರಕ್ ಹಾಗೂ ಮೂವರ ಹುಡುಕಾಟಕ್ಕೆ ಗಂಗಾವಳಿ ನದಿಯ ನೀರಿನ ವೇಗದ ಹರಿವು ಅಡ್ಡಿಯಾಗಿದೆ. ನದಿಯಾಳದಲ್ಲಿ ಟ್ರಕ್ ಇರುವ ಜಾಗವನ್ನು ನಿವೃತ್ತ ಮೇಜರ್ ಜನರಲ್ ಇಂದ್ರಬಾಲನ್ ಅವರ ತಂಡವು ಸುಧಾರಿತ ಡ್ರೋನ್ ಮೂಲಕ ನಿಖರವಾಗಿ ಗುರುತಿಸುವ ಕಾರ್ಯವನ್ನು ಶುಕ್ರವಾರ ಮಧ್ಯಾಹ್ನದ ಹೊತ್ತಿಗೆ ಮುಗಿಸಿ ವರದಿ ನೀಡಿದೆ. ನೌಕಾಸೇನೆಯ ಮುಳುಗು ತಜ್ಞರು ಶುಕ್ರವಾರ ಆಗಮಿಸಿದ್ದರೂ ನೀರಿನ ಹರಿವು ವೇಗವಾಗಿರುವುದರಿಂದ ಇಳಿಯಲು ಸಾಧ್ಯವಾಗಿಲ್ಲ.
ತೇಲುವ ಜಟ್ಟಿ ಅಥವಾ ಪಂಟೂನ್ ಶನಿವಾರ ತರಿಸಲಾಗುತ್ತಿದ್ದು, ಟ್ರಕ್ ಇರಬಹುದಾದ ಸ್ಥಳಗಳಲ್ಲಿ ಜಟ್ಟಿ ಅಳವಡಿಸಿ, ಅಲ್ಲಿಂದ ನೀರಿನಾಳಕ್ಕೆ ಪೈಪ್ ಇಳಿಸಿ ಟ್ರಕ್ ಸಿಗಲಿದೆಯೇ ಎಂದು ಹುಡುಕುವ ಕಾರ್ಯ ನಡೆಸಲಾಗುವುದು. ಎಂದು ಡಿಸಿ ಸ್ಪಷ್ಟಪಡಿಸಿದ್ದಾರೆ. ನಾಪತ್ತೆಯಾಗಿರುವ ಅರ್ಜುನ್ ಟ್ರಕ್ ಓಳಗೇ ಇರುವ ಸಾಧ್ಯತೆ ಅಧಿಕವಾಗಿದೆ. ಅಲ್ಲದೇ ಜಗನ್ನಾಥ ನಾಯ್ಕ ಹಾಗೂ ಲೋಕೇಶ ನಾಯ್ಕ ಅವರು ನದಿಯಡಿ ಇರುವ ಮಣ್ಣಿನಲ್ಲಿ ಸಿಕ್ಕಿಹಾಕಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ. ಕೋಸ್ಟ್ಗಾರ್ಡ್ ಹೆಲಿಕಾಫ್ಟರ್‌ನ ಸತತ 2 ದಿನದ ಹುಡುಕಾಟದ ಬಳಿಕವೂ ಗಂಗಾವಳಿ ನದಿಯಲ್ಲಿ ಯಾವುದೇ ಶವಗಳು ಸಿಕ್ಕಿಲ್ಲ.
ಗುರುವಾರ ತಡ ರಾತ್ರಿಯವರೆಗೆ ಲಾಂಗ್ ಆರ್ಮ್ ಬೂಮರ್ ಮೂಲಕ ಚಹಾ ಅಂಗಡಿ ಇರುವ ಸ್ಥಳದ ಕೆಳಗೆ ಮಣ್ಣು ತೆಗೆದು ಅವಶೇಷಗಳಿಗಾಗಿ ಹುಡುಕಾಟ ನಡೆಸಲಾಯಿತು. ಲಕ್ಷ್ಮಣ ನಾಯ್ಕ ಮನೆಯ ಸಾಮಗ್ರಿಗಳನ್ನು ಬಿಟ್ಟರೆ ಬೇರೇನೂ ಪತ್ತೆಯಾಗಿಲ್ಲ. ಕೇರಳದ ಪಿಡಬ್ಲುಡಿ ಸಚಿವ ರಿಯಾಜ್ ಅಹಮದ್ ಅವರು ಶುಕ್ರವಾರ ಶಿರೂರಿಗೆ ಭೇಟಿ ನೀಡಿ ಕಾರ್ಯಾಚರಣೆಯನ್ನು ವೀಕ್ಷಿಸಿದರು. ಜಿಲ್ಲಾಽಕಾರಿ, ಎಸ್.ಪಿ. ಹಾಗೂ ಶಾಸಕ ಸತೀಶ ಸೈಲ್ ಅವರಿಂದ ಮಾಹಿತಿ ಪಡೆದುಕೊಂಡರು.