ಹೊಸ ಸಂಹಿತೆಗಳಿಂದ ತ್ವರಿತ ನ್ಯಾಯ

mdg sdmgs
ಬಿಳಗುಳ ಗ್ರಾಮದಲ್ಲಿ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಪಿಎಸ್‌ಐ ಶ್ರೀನಾಥ್ ರೆಡ್ಡಿ ಮಾತನಾಡಿದರು. ಪಿ.ಶಿವಾನಂದ, ಕಿಶೋರ್, ನಾಗರಾಜ್, ಪ್ರವೀಣ್ ಪೂಜಾರಿ, ರವಿ, ಜೈವಂತ್, ಮಹೇಶ್, ಅಜಿತ್ ಇತರರಿದ್ದರು.
Published on

ಮೂಡಿಗೆರೆ: ದಿನ ಕಳೆದಂತೆ ಕಾನೂನು ಇನ್ನಷ್ಟು ಬಿಗಿಗೊಳ್ಳುತ್ತಿದೆ. ಭಾರತೀಯ ನ್ಯಾಯ ಸಂಹಿತೆ ಮತ್ತು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಎಂಬ ಹೊಸ ಕಲಂ ಜಾರಿಗೆ ತರಲಾಗಿದೆ. ಹೊಸದಾಗಿ ಜಾರಿಗೆ ಬಂದಿರುವ ಬಿಎನ್‌ಎಸ್ ಕಲಂ ಬಗ್ಗೆ ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ಅರಿವು ಮೂಡಿಸುಸುತ್ತಿದೆ ಎಂದು ಪಿಎಸ್‌ಐ ಶ್ರೀನಾಥ್ ರೆಡ್ಡಿ ತಿಳಿಸಿದರು.

ಬಿಳಗುಳ ಗ್ರಾಮದಲ್ಲಿ ಪೊಲೀಸ್ ಇಲಾಖೆ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಭಾನುವಾರ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿ, ಸಾರ್ವಜನಿಕರಿಗೆ ಪೊಲೀಸ್ ಇಲಾಖೆ ರಕ್ಷಣೆ ನೀಡಲು ಮತ್ತು ಅಪರಾಧಗಳ ತನಿಖೆ ನಡೆಸಲು ಹೊಸ ಸ್ವರೂಪ ಇಲಾಖೆ ಅಳವಡಿಸಿಕೊಂಡಿದೆ. ಇದರಿಂದ ತ್ವರಿತವಾಗಿ ಜನತೆಗೆ ನ್ಯಾಯ ಸಿಗುತ್ತಿದೆ. ಜೂನ್‌ವರೆಗೆ ನಡೆದಿದ್ದ ಎಲ್ಲ ಪ್ರಕರಣಗಳಿಗೆ ಐಪಿಸಿ ಕಲಂನಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಬೇಕಾಗಿದೆ. ಜುಲೈನಿಂದ ಹೊಸದಾಗಿ ಬಂದಿರುವ ಬಿಎನ್‌ಎಸ್ ಕಲಂನಂತೆ ಕರ್ತವ್ಯ ನಿರ್ವಹಿಸಬೇಕಾಗಿದೆ ಎಂದರು.
ಪೊಲೀಸ್ ಇಲಾಖೆ ಮೇಲೆ ಜನ ಇಟ್ಟಿರುವ ಭರವಸೆ ಉಳಿಸಿಕೊಳ್ಳುವ ಸಲುವಾಗಿ ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸುವುದು ಇಲಾಖೆಯ ಗುರಿ. ಸಾರ್ವಜನಿಕರು ಪೊಲೀಸ್ ಠಾಣೆಗೆ ಭೇಟಿ ನೀಡಿ ಕಾನೂನಿನ ಕುರಿತು ಪೊಲೀಸರಿಂದ ಮಾಹಿತಿ ಪಡೆಯಬಹುದು ಎಂದು ತಿಳಿಸಿದರು.
ಜನ ಪೊಲೀಸ್ ಠಾಣೆಗೆ ಭೇಟಿ ನೀಡಲು ಹಿಂಜರಿಯಬಾರದು. ಜನರ ಸಹಕಾರವಿದ್ದರೆ ಮಾತ್ರ ಅಪರಾಧ ಸಂಖ್ಯೆಗಳನ್ನು ಕಡಿಮೆ ಮಾಡಬಹುದು ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಪಿ.ಶಿವಾನಂದ, ಶೌರ್ಯ ವಿಪತ್ತು ತಂಡದ ಯೋಜನಾಧಿಕಾರಿ ಕಿಶೋರ್, ಜನಜಾಗೃತಿ ಯೋಜನಾಧಿಕಾರಿ ನಾಗರಾಜ್, ಶೌರ್ಯ ವಿಪತ್ತು ತಂಡದ ತಾಲೂಕು ಮಾಸ್ಟರ್ ಪ್ರವೀಣ್ ಪೂಜಾರಿ, ತಂಡದ ಕ್ಯಾಪ್ಟನ್ ರವಿ, ಮಹೇಶ್, ಅಜಿತ್, ಶಿವಾನಂದ, ಬಿ.ಸುರೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net