ಬದನವಾಳು ಖಾದಿ ಕೇಂದ್ರ ಅಭಿವೃದ್ಧಿಗೆ ಶೀಘ್ರ ಚಾಲನೆ

njd news 2,photo03
ನಂಜನಗೂಡಿನಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಬದನವಾಳು ಗ್ರಾಮಕ್ಕೆ ಹಮ್ಮಿಕೊಂಡಿದ್ದ ಪಾದಯಾತ್ರೆಗೆ ಶಾಸಕ ದರ್ಶನ್ ಧ್ರುವನಾರಾಯಣ ಗಿಡ ನೆಡುವ ಮೂಲಕ ಚಾಲನೆ ನೀಡಿದರು.
Published on

ನಂಜನಗೂಡು: ಮಹಾತ್ಮ ಗಾಂಧೀಜಿ ಅವರಿಗೂ ಬದನವಾಳು ಗ್ರಾಮಕ್ಕೂ ಅವಿನಾಭಾವ ಸಂಬಂಧ ಇರುವುದರಿಂದ ಖಾದಿ ಕೇಂದ್ರದ ಅಭಿವೃದ್ಧಿಗೆ ಶೀಘ್ರ ಚಾಲನೆ ದೊರೆಯಲಿದೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ ಹೇಳಿದರು.


ತಾಲೂಕಿನ ಬದನವಾಳು ಗ್ರಾಮದ ಖಾದಿ ಗ್ರಾಮೋದ್ಯೋಗ ಕೇಂದ್ರದಲ್ಲಿ ಬುಧವಾರ ಗಾಂಧಿ ಹಾಗೂ ಲಾಲ್ ಬಹಾದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಬದನವಾಳು ಪಾದಯಾತ್ರೆ ಯಶಸ್ವಿಯಾಗಿದೆ. ಖಾದಿ ಕೇಂದ್ರವನ್ನು ಅಭಿವೃದ್ಧಿಪಡಿಸಲು ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ ಎಂದು ತಿಳಿಸಿದರು.


2027ಕ್ಕೆ ಖಾದಿ ಕೇಂದ್ರಕ್ಕೆ 100 ವರ್ಷ ತುಂಬಲಿದ್ದು, ಶತಮಾನೋತ್ಸವ ಕಾರ್ಯಕ್ರಮಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಆಗಮಿಸಲಿದ್ದಾರೆ ಎಂದ ಅವರು, ಪೌರಕಾರ್ಮಿಕರಿಗೆ ಹಕ್ಕು ಪತ್ರಗಳನ್ನು ವಿತರಿಸಿದರು.


ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ನಗರಸಭಾ ಅಧ್ಯಕ್ಷ ಶ್ರೀಕಂಠು, ಗ್ರಾ.ಪಂ ಅಧ್ಯಕ್ಷ ದೊರೆಸ್ವಾಮಿ, ತಹಸೀಲ್ದಾರ್ ಶಿವಕುಮಾರ್ ಕಾಸನೂರು, ಇಒ ರಾಜೇಶ್, ಬಿಇಒ ಮಹೇಶ್, ಕುರಹಟ್ಟಿ ಮಹೇಶ್, ಲತಾಸಿದ್ದಶೆಟ್ಟಿ ಇತರರು ಇದ್ದರು.


ನಂಜನಗೂಡು ಪಟ್ಟಣದ ನಾಗಮ್ಮ ಶಾಲೆ ಆವರಣದಿಂದ ಶಾಸಕ ದರ್ಶನ್ ಧ್ರುವನಾರಾಯಣ ಅವರು ಬದನವಾಳು ಗ್ರಾಮಕ್ಕೆ ಪಾದಯಾತ್ರೆಗೆ ಗಿಡ ನೆಟ್ಟು ಚಾಲನೆ ನೀಡಿದರು. ಸುಮಾರು 15 ಕಿ.ಮೀ.ದೂರದಲ್ಲಿರುವ ಚಾಮರಾಜನಗರ-ನಂಜನಗೂಡು ಹೆದ್ದಾರಿಯಲ್ಲಿರುವ ಬದನವಾಳು ಗ್ರಾಮಕ್ಕೆ ಅಧಿಕಾರಿಗಳು, ಕಾರ್ಯಕರ್ತರ ಜತೆಗೂಡಿ ತೆರಳಿ ಗ್ರಾಮದಲ್ಲಿರುವ ಮಹಾತ್ಮ ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ವೇದಿಕೆ ಕಾರ್ಯಕ್ರಮಕ್ಕೆ ಆಗಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net