

ಚಿತ್ರದುರ್ಗ: ಜಲ ಜೀವನ್ ಮಿಷನ್(ಜೆಜೆಎಂ)ಹಾಗೂ ಬಹು ಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆ(ಎಂವಿಎಸ್)ಕಾಮಗಾರಿಗಳನ್ನು ತ್ವರಿತ ಪೂರ್ಣಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಜಿಪಂನಲ್ಲಿ ಸೋಮವಾರ ಜೆಜೆಎಂ ಹಾಗೂ ಎಂವಿಎಸ್ ಕಾಮಗಾರಿಗಳ ಪ್ರಗತಿ ಪರಿಶೀಲಿಸಿ ಮಾತನಾಡಿ, ಈಗಾಗಲೇ ಪೂರ್ಣಗೊಂಡ ಕಾಮಗಾರಿಗಳಲ್ಲಿ ಪ್ರಾಯೋಗಿಕವಾಗಿ ನೀರು ಹರಿಸಬೇಕು. ಅಡಚಣೆ ಕಂಡು ಬಂದಂತೆ ತಕ್ಷಣ ಅವುಗಳನ್ನು ಸರಿಪಡಿಸಿ ಗ್ರಾಪಂಗಳಿಗೆ ಹಸ್ತಾಂತರಿಸಬೇಕು.
ಓವರ್ ಹೆಡ್ ಟ್ಯಾಂಕ್‌ಗಳ ನಿರ್ಮಾಣಕ್ಕೆ ಜಾಗದ ತೊಂದರೆ ಇರುವ ಗ್ರಾಮಗಳ ಪಟ್ಟಿ ಸಿದ್ಧಪಡಿಸಿ, ಶಾಸಕರೊಂದಿಗೆ ಚರ್ಚಿಸಬೇಕು. ಸ್ಥಳೀಯ ಜನಪ್ರತಿನಿಧಿಗಳ ಸಹಾಯದಿಂದ ಸಮಸ್ಯೆ ಪರಿಹರಿಸಿ ಕೂಡಲೇ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಕುಡಿಯುವ ನೀರಿನ ಕಾಮಗಾರಿಗಳ ಪೈಪ್‌ಲೈನ್ ಅಳವಡಿಕೆಗೆ ಅರಣ್ಯಇಲಾಖೆ ಅಧಿಕಾರಿಗಳು ಸಹರಿಸಬೇಕು. ಮೂಲ ಸೌಲಭ್ಯಗಳ ಕಾಮಗಾರಿಗಳಿಗೆ ಅನುಮತಿ ನೀಡಲು ಅರಣ್ಯ ಇಲಾಖೆ ನಿಯಮಗಳಲ್ಲಿ ಅವಕಾಶವಿದೆ. ಈ ಕುರಿತು ಜಿಪಂ ಸಿಇಒ ನೇತೃತ್ವದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ, ವಲಯ ಅರಣ್ಯಾಧಿಕಾರಿಗಳು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಇಂಜಿನಿಯರ್ ಹಾಗೂ ಗುತ್ತಿಗೆದಾರರ ಸಭೆ ನಡೆಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತೆ ಸಚಿವರು ನಿರ್ದೇಶಿಸಿದರು.
ಕೆಎಂಇಆರ್‌ಸಿ ಹಾಗೂ ಡಿಎಂಎಫ್ ಯೋಜನೆಯಡಿ ಗ್ರಾಮೀಣ ಪ್ರಮುಖ ರಸ್ತೆಗಳ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಸಮನ್ವಯದೊಂದಿಗೆ ರಸ್ತೆ ನಿರ್ಮಾಣಕ್ಕೂ ಮುನ್ನ ಪೈಪ್‌ಲೈನ್‌ಗಳನ್ನು ಅಳವಡಿಸಬೇಕು. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದರೂ, ಕಾಮಗಾರಿ ಆರಂಭಿಸದ ಗುತ್ತಿಗೆದಾರರನ್ನು ಕೈಬಿಟ್ಟು, ಮರು ಟೆಂಡರ್ ಮಾಡಿ ಕಾಮಗಾರಿ ತ್ವರಿತವಾಗಿ ಆರಂಭಿಸಬೇಕು ಎಂದು ಸೂಚಿಸಿದರು.
ಜಿಲ್ಲೆಯಲ್ಲಿ 938 ಕೋಟಿ ರೂ.ವೆಚ್ಚದಲ್ಲಿ 1,560 ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ. 856 ಕಾಮಗಾರಿಗಳು ಪೂರ್ಣಗೊಂಡಿವೆ. 660 ಪ್ರಗತಿಯಲ್ಲಿವೆ. 44 ಪ್ರಾರಂಭವಾಗಬೇಕಿದೆ. ಶೇ.50 ಆರ್ಥಿಕ ಪ್ರಗತಿಯಾಗಿದೆ. 511ನ್ನು ಗ್ರಾಪಂಗಳಿಗೆ ಹಸ್ತಾಂತರಿಸಲಾಗಿದೆ ಎಂದು ಜಿಪಂ ಸಿಇಒ ಡಾ.ಎಸ್. ಆಕಾಶ್ ಹೇಳಿದರು. 2,997 ಕೋಟಿ ರೂ.ವೆಚ್ಚದಲ್ಲಿ 10 ಎವಿಎಸ್‌ಗಳನ್ನು ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.
ಐಮಂಗಲ, ಜವಗೊಂಡನಹಳ್ಳಿ ಸೇರಿ 76 ಹಳ್ಳಿಗಳ ಎಂವಿಎಸ್‌ನಲ್ಲಿ 37 ಹಳ್ಳಿಗಳ ಕಾಮಗಾರಿ ಪೂರ್ಣಗೊಂಡಿವೆ. 34 ಅಂತಿಮ ಹಂತದಲ್ಲಿವೆ. ಓಬಳಾಪುರದಲ್ಲಿ ಈಗಿರುವ ವ್ಯವಸ್ಥೆಯಡಿ ನೀರು ಸರಬರಾಜು ಕೋರಿ ಗ್ರಾಪಂ ನಿರ್ಣಯಿಸಿದೆ. ಮರಡಿಹಳ್ಳಿ ಕಾಮಗಾರಿಗೆ ಮರು ಟೆಂಡರ್ ಕರೆಯಲಾಗಿದೆ.
ಯಲಕೂರನಹಳ್ಳಿ ಸೇರಿ ಹಲವು ಗ್ರಾಮಗಳಲ್ಲಿ ಓವರ್ ಹೆಡ್‌ಟ್ಯಾಂಕ್‌ಗಳಿಗೆ ಜಾಗಬೇಕಿದೆ. 17 ಗ್ರಾಮಗಳಲ್ಲಿ ಕಾಮಗಾರಿಗಳನ್ನು ಪ್ರಾರಂಭಿಸಬೇಕಿದೆ ಎಂದು ಅಧಿಕಾರಿಗಳು ವಿವರಿಸಿದರು.
ಜಿಪಂ ಡಿಎಸ್ ಡಾ.ರಂಗಸ್ವಾಮಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಇಇ ಬಸನಗೌಡ ಪಾಟೀಲ್, ಜೆಜೆಎಂ ಯೋಜನಾ ವ್ಯವಸ್ಥಾಪಕ ಮಂಜುನಾಥ ಎಸ್. ನಾಡರ್ ಇತರರಿದ್ದರು.