ಕೇಂದ್ರ ವಸತಿ ಯೋಜನೆಗೆ ವೇಗ, ಅಭಿವೃದ್ಧಿ ಸಮನ್ವಯ, ಉಸ್ತುವಾರಿ ಸಮಿತಿ ಸಭೆಯಲ್ಲಿ ಸಂಸದ ನಳಿನ್ ಸೂಚನೆ

Nalin kumar Kateel
Published on

ಮಂಗಳೂರು: ಕೇಂದ್ರ ಪುರಸ್ಕೃತ ವಸತಿ ಯೋಜನೆಯಲ್ಲಿ ದ.ಕ ಜಿಲ್ಲೆ ಹಿಂದುಳಿದಿದ್ದು, ಮಳೆಗಾಲಕ್ಕೆ ಮೊದಲು ಫಲಾನುಭವಿಗಳಿಗೆ ಮನೆ ವಿತರಿಸುವುದಕ್ಕೆ ಕ್ರಮ ಕೈಗೊಳ್ಳಬೇಕು. ಅದಕ್ಕೆ ಪೂರಕವಾಗಿ 10 ದಿನದೊಳಗೆ ತಂಡವೊಂದನ್ನು ರಚಿಸಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ದ.ಕ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ದ.ಕ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರಧಾನಿಯವರ ಆದ್ಯತೆಯ ಯೋಜನೆ ಇದಾಗಿದ್ದು, ಬಡವರಿಗೆ ಮನೆ ಲಭಿಸಬೇಕು ಎನ್ನುವುದು ಅವರ ಒತ್ತಾಸೆಯಾಗಿದೆ. ಅದರಂತೆ ಯೋಜನೆಗೆ ವೇಗ ತರುವುದಕ್ಕೆ ಕಂದಾಯ ಅಧಿಕಾರಿಗಳನ್ನೂ ಸೇರಿಸಿಕೊಂಡು ತಂಡ ರಚಿಸಬೇಕು. ಮಳೆಗಾಲಕ್ಕೆ ಮೊದಲು ಕೆಲವಾದರೂ ಫಲಾನುಭವಿಗಳಿಗೆ ಮನೆ ಲಭಿಸುವಂತೆ ಮಾಡಬೇಕು ಎಂದರು.

ಈ ಕುರಿತು ಮಾತನಾಡಿದ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ, ರಾಜೀವ್ ಗಾಂಧಿ ವಸತಿ ನಿಗಮದ ವ್ಯಾಪ್ತಿಯ ವಸತಿ ಯೋಜನೆಗಳಲ್ಲಿ ಫಲಾನುಭವಿ ವರ್ಷವಾದರೂ ಮನೆ ನಿರ್ಮಾಣ ಶುರು ಮಾಡದಿರುವ ಪ್ರಸಂಗದಲ್ಲಿ ಅದನ್ನು ಲಾಕ್ ಮಾಡಲಾಗುತ್ತದೆ. ಯಾವ ಕಾರಣಕ್ಕೆ ಫಲಾನುಭವಿಗಳು ಕೆಲಸ ಶುರು ಮಾಡಿಲ್ಲ, ಅಥವಾ ವಿವಿಧ ಹಂತಗಳಲ್ಲೇ ಬಾಕಿ ಉಳಿಸಿದ್ದಾರೆ ಎನ್ನುವುದನ್ನು ಅಧಿಕಾರಿಗಳು ತಿಳಿದುಕೊಳ್ಳಿ. ಬಳಿಕ ಲಾಕ್ ತೆರವುಗೊಳಿಸುವಂತೆ ನಿಗಮವನ್ನು ಕೇಳಿಕೊಳ್ಳಬಹುದು ಎಂದರು.

ಹಣದ ತೊಂದರೆಯಿಂದ ಪಂಚಾಂಗವನ್ನೂ ನಿರ್ಮಿಸಲಾಗದ ಫಲಾನುಭವಿಗಳಿಗೆ ವಿವಿಧ ಕಾರ್ಯಕ್ರಮಗಳಡಿಯಲ್ಲಿ ಸಾಲದ ನೆರವು ತೆಗೆಸಿಕೊಡುವಂತೆಯೂ ಅವರು ಸೂಚಿಸಿದರು.

ಪ್ರತಿ ತಿಂಗಳೂ ಮೀಟಿಂಗ್: ಕೇಂದ್ರದ ಪುರಸ್ಕೃತ ವಸತಿ, ಕುಡಿಯುವ ನೀರು ಮುಂತಾದ ಯೋಜನೆಗಳನ್ನು ಚುರುಕುಗೊಳಿಸಲು ಪ್ರತಿ ತಿಂಗಳು ಸಭೆ ನಡೆಸಬೇಕು, ನನ್ನ ಸಮಯವನ್ನೂ ನಿಗದಿಪಡಿಸಿ, ಆ ದಿನ ತಡವಾಗಿ ರಾತ್ರಿಯಾದರೂ ಸಭೆ ನಡೆಸುತ್ತೇನೆ ಎಂದು ನಳಿನ್ ತಿಳಿಸಿದರು.

ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮೇಯರ್ ದಿವಾಕರ ಪಾಂಡೇಶ್ವರ, ಶಾಸಕರಾದ ವೇದವ್ಯಾಸ ಕಾಮತ್, ರಾಜೇಶ್ ನಾಯ್ಕ, ಡಾ.ಭರತ್ ಶೆಟ್ಟಿ, ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕುಮಾರ್, ಅಪರ ಜಿಲ್ಲಾಧಿಕಾರಿ ರೂಪಾ, ಮನಪಾ ಆಯುಕ್ತ ಅಕ್ಷಿ ಶ್ರೀಧರ್ ಉಪಸ್ಥಿತರಿದ್ದರು.

ಪುಂಜಾಲಕಟ್ಟೆ ರಸ್ತೆ ತ್ವರಿತಕ್ಕೆ ಸೂಚನೆ: ಬಿ.ಸಿ.ರೋಡ್-ಪುಂಜಾಲಕಟ್ಟೆ ಮಧ್ಯೆ ಚತುಷ್ಪಥ ಹೆದ್ದಾರಿ ನಿರ್ಮಾಣದ ಕೆಲಸ ಜೂನ್‌ವರೆಗೆ ವಿಸ್ತರಣೆಯಾಗಿದ್ದು, ಇನ್ನಷ್ಟು ವಿಸ್ತರಣೆ ಅವಕಾಶ ನೀಡಬಾರದು. ಅದರೊಳಗೆ ಪೂರ್ಣಗೊಳಿಸುವಂತೆ ಗುತ್ತಿಗೆದಾರರ ಮೇಲೆ ಒತ್ತಡ ಹೇರಬೇಕು ಎಂದು ನಳಿನ್ ಹೆದ್ದಾರಿ ಇಲಾಖೆ ಕಾರ್ಯಕಾರಿ ಇಂಜಿನಿಯರ್‌ಗೆ ತಿಳಿಸಿದರು.

ಹೆದ್ದಾರಿ ಕೆಲಸ ಆಗುವಲ್ಲಿ ಯಾವುದೇ ಸಿಗ್ನಲ್ ವ್ಯವಸ್ಥೆ ಇಲ್ಲ, ಇದರಿಂದ ರಾತ್ರಿ ವಾಹನ ಚಾಲನೆ ಮಾಡುವುದು ಅಪಾಯಕಾರಿಯಾಗಿದೆ. ಇಂತಹ ಬೇಜವಾಬ್ದಾರಿ ಯಾಕೆ ಎಂದು ಪ್ರಶ್ನಿಸಿದರು.

ಪ್ರತಿ ತಿಂಗಳೂ ರಸ್ತೆ ಸುರಕ್ಷತೆ ಕುರಿತು ಸುಪ್ರೀಂಕೋರ್ಟ್ ನಿರ್ದೇಶನದ ಅನ್ವಯ ಸಭೆ ನಡೆಸಲಾಗುತ್ತಿದ್ದು, ಅದಕ್ಕೆ ಕಡ್ಡಾಯವಾಗಿ ಹೆದ್ದಾರಿ ಇಲಾಖೆಯವರು ಬಂದು ಅಲ್ಲಿ ನೀಡಲಾಗುವ ಸಲಹೆಗಳನ್ನು ಕಾರ್ಯಗತಗೊಳಿಸಬೇಕು. ಅನುದಾನದ ಅವಶ್ಯಕತೆ ಇದ್ದಲ್ಲಿ ತಿಳಿಸಬೇಕು. ಹೆದ್ದಾರಿ ಇಲಾಖೆ ಮಾತ್ರವಲ್ಲದೆ ಸಾರಿಗೆ ಇಲಾಖೆಯಿಂದಲೂ ಅನುದಾನದ ವ್ಯವಸ್ಥೆ ಮಾಡಿಸುವುದಕ್ಕೆ ಅವಕಾಶಗಳಿವೆ ಎಂದು ಜಿಲ್ಲಾಧಿಕಾರಿ ಈ ಸಂದರ್ಭ ತಿಳಿಸಿದರು.

ಕೋಸ್ಟ್‌ಗಾರ್ಡ್ ಜಮೀನು ವಾರದೊಳಗೆ ತೆರವು: ಕೆಂಜಾರಿನಲ್ಲಿ ಕೋಸ್ಟ್ ಗಾರ್ಡ್ ತರಬೇತಿ ಅಕಾಡೆಮಿಗೆ ಮೀಸಲಿಟ್ಟ ಸರ್ಕಾರಿ ಜಾಗವನ್ನು ಖಾಸಗಿಯವರು ಅತಿಕ್ರಮಿಸಿದ್ದು ಕಂಡು ಬಂದಿದ್ದು, ಒಂದು ವಾರದೊಳಗೆ ಅದನ್ನು ತೆರವುಗೊಳಿಸಲಾಗುವುದು ಎಂದು ದ.ಕ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ತಿಳಿಸಿದರು.

ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯು ಕೆಂಜಾರಿನ ಜಾಗವನ್ನು ದುಡ್ಡು ನೀಡಿ ಖರೀದಿಸಿದ್ದು, ಅದನ್ನು ಕೋಸ್ಟ್‌ಗಾರ್ಡ್ ಅಕಾಡೆಮಿಗೆ ಮೀಸಲಿಡಲಾಗಿದೆ. ಆದರೆ ಆ ಬಳಿಕವೂ ಅದರೊಳಗಿನ ಜಮೀನನ್ನು ಬೇರೆಯವರಿಗೆ ಮಾರಾಟ ಮಾಡಲಾಗಿದೆ. ಭೂ ಪರಿವರ್ತನೆ ಮಾಡಿ, ಮ್ಯುಟೇಶನ್ ಮಾಡಿ ನೋಂದಣಿ ಮಾಡಿರುವುದು ಗಂಭೀರ ಪ್ರಕರಣ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧವೂ ಕ್ರಮ ಆಗಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಸಂಸದ ನಳಿನ್ ಪ್ರತಿಕ್ರಿಯಿಸಿ, ಪ್ರಸಕ್ತ ಆ ಜಾಗದಲ್ಲಿ ಕಾರ್ಯಾಚರಿಸುತ್ತಿರುವ ಕಪಿಲ ಗೋಶಾಲಾ ಸಂಸ್ಥೆ ಈ ಕುರಿತಂತೆ ಮುಖ್ಯಮಂತ್ರಿ ಹಾಗೂ ಮೇನಕಾ ಗಾಂಧಿಯನ್ನೂ ಭೇಟಿ ಮಾಡಿದೆ. ನಾವೂ ಗೋವುಗಳ ಸಂರಕ್ಷಣೆಯನ್ನು ಬೆಂಬಲಿಸುವವರು. ಆದರೆ ಸರ್ಕಾರಿ ಭೂಮಿ ಅತಿಕ್ರಮಣವನ್ನು ಯಾವುದೇ ಕಾರಣಕ್ಕೂ ಸಹಿಸಲಾಗದು ಎಂದರು.

ಪ್ರಸ್ತುತ ಈ ಜಾಗದಲ್ಲಿ ಗೋಶಾಲೆ ಕಾರ್ಯಾಚರಿಸುತ್ತಿರುವುದರಿಂದ ಅದಕ್ಕೆ ಪ್ರತ್ಯೇಕ ಗೋಮಾಳ ಜಾಗ ಅಗತ್ಯವಿದ್ದಲ್ಲಿ ಗುರುತಿಸಲು ಜಿಲ್ಲಾಡಳಿತ ಸಿದ್ಧವಿದೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ತಿಳಿಸಿದರು.

ಸ್ಮಾರ್ಟ್‌ಸಿಟಿ ಕಾಮಗಾರಿ ವಿಳಂಬವಾದರೆ ಅಧಿಕಾರಿಗಳ ವರ್ಗಾವಣೆ: ಸ್ಮಾರ್ಟ್‌ಸಿಟಿ ಯೋಜನೆಯ ಕಾಮಗಾರಿಗಳು ವಿಳಂಬವಾಗಿ ಅನುದಾನ ಹಿಂದೆ ಹೋಗುವ ಪರಿಸ್ಥಿತಿ ಉಂಟಾದರೆ ಸ್ಮಾರ್ಟ್ ಸಿಟಿ ಇಂಜಿನಿಯರ್‌ಗಳನ್ನು ವರ್ಗಾಯಿಸಬೇಕಾಗುತ್ತದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಎಚ್ಚರಿಕೆ ನೀಡಿದರು.

ಈಗ ಹೈಕೋರ್ಟ್ ಆದೇಶದಿಂದಾಗಿ ಕಾಮಗಾರಿಗಳು ಸ್ಥಗಿತಗೊಂಡಿವೆ. ಆದರೆ ಈ ಹಿಂದೆಯೇ ಆಗಬೇಕಾಗಿದ್ದಂತಹ ಕಾಮಗಾರಿಗಳನ್ನು ಪೂರೈಸುವಲ್ಲಿ ಅಧಿಕಾರಿಗಳು ನಿರ್ಲಕ್ಷೃ ತೋರಿದ್ದಾರೆ. ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳ್ಳದೆ ಯೋಜನೆ ಅನುದಾನ ಹಿಂದಕ್ಕೆ ಹೋದರೆ ಜನರಿಗೆ ಉತ್ತರಿಸುವುದು ಹೇಗೆ ಎಂದು ಪ್ರಶ್ನಿಸಿದರು.

ಸ್ಮಾರ್ಟ್‌ಸಿಟಿ ಕಾಮಗಾರಿಗೆ ಸದ್ಯ ಹೈಕೋರ್ಟ್‌ನಿಂದ ತಡೆಯಾಜ್ಞೆ ಇದೆ. ಆದರೆ ಎಂಟು ತಿಂಗಳ ಹಿಂದೆಯೇ ಬಂದರು ಪ್ರದೇಶದಲ್ಲಿನ ಒಳಚರಂಡಿ ಕಾಮಗಾರಿ ಕುರಿತಂತೆ ಎಸಿಪಿ ಜತೆ ಪರಿಶೀಲನೆ ನಡೆಸಿ ಶೀಘ್ರವಾಗಿ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೆ. ಇದೀಗ ತಡೆಯಾಜ್ಞೆ ತೆರವುಗೊಂಡರೂ ಇನ್ನು ಕಾಮಗಾರಿ ನಡೆಸಲು ಸಿಗುವುದು ಎರಡು ತಿಂಗಳು ಮಾತ್ರ. ಮತ್ತೆ ಮಳೆ ಆರಂಭವಾದರೆ ಸುಮಾರು ಆರು ತಿಂಗಳು ಯಾವುದೇ ಕಾಮಗಾರಿ ಸಾಧ್ಯವಾಗುವುದಿಲ್ಲ. ಅಧಿಕಾರಿಗಳ ನಿರ್ಲಕ್ಷೃದಿಂದ ಜನಸಾಮಾನ್ಯರು ಸಮಸ್ಯೆ ಎದುರಿಸಬೇಕಾಗಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಸಭೆಯಲ್ಲಿ ಕಳವಳ ವ್ಯಕ್ತಪಡಿಸಿದರು.

ಸ್ಮಾರ್ಟ್‌ಸಿಟಿ ಯೋಜನೆಗಳ ಅಡಿಯಲ್ಲಿ ಆರಂಭಿಸಲಾದ ಕಾಮಗಾರಿ ತಡೆಯಾಜ್ಞೆಯನ್ನು ಹೈಕೋರ್ಟ್ ಶೀಘ್ರವೇ ತೆರವುಗೊಳಿಸುವ ನಿರೀಕ್ಷೆ ಇದೆ ಎಂದು ಪಾಲಿಕೆ ಆಯುಕ್ತ ಅಕ್ಷಿ ಶ್ರೀಧರ್ ತಿಳಿಸಿದರು.

ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಪ್ರತಿಕ್ರಿಯಿಸಿ, ಹೈಕೋರ್ಟ್ ಅನುಮತಿ ನೀಡಿದಾಕ್ಷಣದಿಂದ ಕಾಮಗಾರಿ ಶೀಘ್ರ ಹಾಗೂ ಅತ್ಯಂತ ವ್ಯವಸ್ಥಿತವಾಗಿ ನಡೆಸಲು ಯೋಜನೆ ಸಿದ್ಧತೆ ಮಾಡುವಂತೆ ಸ್ಮಾರ್ಟ್‌ಸಿಟಿ ಅಧಿಕಾರಿಗಳಿಗೆ ನಿರ್ದೇಶಿಸಿದರು.

ಅಮೃತ್ ಯೋಜನೆಗೆ ತ್ರಿಪಕ್ಷೀಯ ಒಪ್ಪಂದ?: ಅಮೃತ್ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆದಾರರು ಕೈಕೊಟ್ಟ ಹಿನ್ನೆಲೆಯಲ್ಲಿ ಬೇರೆ ಉಪಗುತ್ತಿಗೆದಾರರೊಂದಿಗೆ ತ್ರಿಪಕ್ಷೀಯ ಒಪ್ಪಂದ ಕೈಗೊಂಡು ಕ್ಲಪ್ತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸುವುದು ಸೂಕ್ತ ಎಂದು ಜಿಲ್ಲಾಧಿಕಾರಿ ರಾಜೇಂದ್ರ ಸಲಹೆಯಿತ್ತರು.

ನಾಲ್ಕು ಪ್ಯಾಕೇಜ್ ಅಡಿಯಲ್ಲಿ ಕಾಮಗಾರಿಗಳು ನಡೆಯುತ್ತಿದ್ದು, ಅದರಲ್ಲಿ ಎರಡು ಪ್ಯಾಕೇಜ್‌ಗಳನ್ನು ನಿರ್ವಹಿಸುತ್ತಿರುವ ಸಿಂಪ್ಲೆಕ್ಸ್ ಇನ್‌ಫ್ರಾಸ್ಟ್ರಕ್ಚರ್ ಹಣಕಾಸು ಕೊರತೆಯಿಂದ ಕಾಮಗಾರಿ ಮುಗಿಸಲಾಗದೆ ಕೈಕೊಟ್ಟಿರುವ ಬಗ್ಗೆ ಸಭೆಯಲ್ಲಿ ಕಳವಳ ವ್ಯಕ್ತವಾಯಿತು.

ಸಂಸದ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯಿಸಿ, ಫೆ.24ರಂದು ನಡೆಯುವ ಸಭೆಯಲ್ಲಿ ಸಿಂಪ್ಲೆಕ್ಸ್ ಸಂಸ್ಥೆಯ ಎಂಡಿ ಪಾಲ್ಗೊಳ್ಳುವಂತೆ ಹಾಗೂ ಸಾರ್ವಜನಿಕರಿಗೆ ತೊಂದರೆ ನೀಡಿರುವ ಹಿನ್ನೆಲೆಯಲ್ಲಿ ಸಂಸ್ಥೆಯ ವಿರುದ್ಧ ಎಫ್‌ಐಆರ್ ದಾಖಲಿಸುವುದು ಹಾಗೂ ಸಂಸ್ಥೆಯ ಎಂಡಿ ಭಾಗವಹಿಸಲು ವಿಫಲರಾದರೆ ಇಂಜಿನಿಯರ್‌ಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net