

ಶಿವಮೊಗ್ಗ : ಜಲಜೀವನ್ ಮಿಷನ್ ಕಾಮಗಾರಿಗೆ ವೇಗ ನೀಡಬೇಕು. ಅರಣ್ಯ ಇಲಾಖೆಯಿಂದ ಇದಕ್ಕೆ ಸಹಕಾರ ನೀಡಬೇಕು. ಜೆಜೆಎಂ ಕಾಮಗಾರಿಗೆ ಅನಗತ್ಯ ತೊಂದರೆ ನೀಡಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಸೂಚಿಸಿದರು.
ಶನಿವಾರ ಕೆಡಿಪಿ ಸಭೆ ನಡೆಸಿದ ಅವರು, ಜೆಜೆಎಂ ಕಾಮಗಾರಿ ವಿಳಂಬವಾಗುತ್ತಿದೆ. ಅನೇಕ ಕಡೆಗಳಲ್ಲಿ ಅರಣ್ಯ ಇಲಾಖೆಯಿಂದ ನಿರಾಕ್ಷೇಪಣೆ ಸಿಗುವುದು ತಡವಾಗುತ್ತಿದೆ. ಪೈಪ್ ಅಳವಡಿಕೆ, ಟ್ಯಾಂಕ್ ನಿರ್ಮಾಣಕ್ಕೂ ಅರಣ್ಯ ಇಲಾಖೆ ಸಿಬ್ಬಂದಿ ತಡೆಯೊಡ್ಡುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಇದನ್ನು ಸಹಿಸಲು ಸಾಧ್ಯವಿಲ್ಲ ಎಂದರು.
ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಮಾತನಾಡಿ, ಜಿಲ್ಲೆಯಲ್ಲಿ ಉತ್ತಮ ಮುಂಗಾರು ಮಳೆಯಾದ ಪರಿಣಾಮ ಭತ್ತದ ಫಸಲು ಉತ್ತಮವಾಗಿದೆ. ವಾರದ ಹಿಂದೆ ಭತ್ತದ ಕ್ವಿಂಟಾಲ್ ಧಾರಣೆ ಮೂರು ಸಾವಿರ ರೂ.ಗೂ ಅಧಿಕವಿತ್ತು. ಈಗ ಎರಡು ಸಾವಿರಕ್ಕೆ ಕುಸಿದಿದೆ. ಸರ್ಕಾರ ರೈತರ ನೆರವಿಗೆ ಮುಂದಾಗಬೇಕು. ಕೂಡಲೇ ಭತ್ತ ಖರೀದಿ ಕೇಂದ್ರ ಆರಂಭಿಸಬೇಕು ಎಂದು ಹೇಳಿದರು.
ಭತ್ತ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೇಂದ್ರ ಸರ್ಕಾರ ಭತ್ತ ಕ್ವಿಂಟಾಲ್‌ಗೆ 2,300 ರೂ. ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಿದೆ. ರಾಜ್ಯ ಸರ್ಕಾರ ಕ್ವಿಂಟಾಲ್‌ಗೆ 700 ರೂ. ಅಥವಾ ಅದಕ್ಕಿಂತ ಹೆಚ್ಚು ಬೆಂಬಲ ಬೆಲೆ ನೀಡಿ ಭತ್ತ ಖರೀದಿ ಕೇಂದ್ರದ ಮೂಲಕ ಸಹಕರಿಸಬೇಕು. ರೈತರನ್ನು ಸಂಕಷ್ಟದಿಂದ ಪಾರು ಮಾಡಬೇಕೆಂದು ಆಗ್ರಹಿಸಿದರು.
ಕಳೆದ ವರ್ಷ ಭತ್ತ ಕಟಾವು ಯಂತ್ರದ ಬಾಡಿಗೆ ದರವನ್ನು ಜಿಲ್ಲಾಡಳಿತವೇ ನಿಗದಿ ಮಾಡಿತ್ತು. ಆದರೆ ಈ ಬಾರಿ ಜಿಲ್ಲಾಡಳಿತ ಯಾವುದೇ ನಿಬಂಧನೆ ವಿಧಿಸದ ಕಾರಣ ತಮಿಳುನಾಡು ಹಾಗೂ ಆಂಧ್ರಪ್ರದೇಶದಿಂದ ಬಂದಿರುವ ಭತ್ತ ಕಟಾವು ಯಂತ್ರದ ಮಾಲೀಕರು ಮನಸೋ ಇಚ್ಛೆ ಬಾಡಿಗೆ ಪಡೆಯುತ್ತಿದ್ದಾರೆ ಎಂದು ಬಿವೈಆರ್ ಕಳವಳ ವ್ಯಕ್ತಪಡಿಸಿದರು.
ಇದಕ್ಕೆ ದನಿಗೂಡಿಸಿದ ಶಾಸಕಿ ಶಾರದಾ ಪೂರ‌್ಯಾನಾಯ್ಕಾ, ಭತ್ತ ಕಟಾವು ಯಂತ್ರದ ಮಾಲೀಕರಿಂದ ಮಲೆನಾಡ ರೈತರ ಆರ್ಥಿಕ ಶೋಷಣೆಯಾಗುತ್ತಿದೆ. ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ಬಾಡಿಗೆ ನಿಗದಿ ಮಾಡಬೇಕು. ರೈತರ ಸುಲಿಗೆಯನ್ನು ತಪ್ಪಿಸಬೇಕು ಎಂದು ಒತ್ತಾಯಿಸಿದರು.
ಕೆಎಸ್‌ಎಫ್‌ಐಡಿಸಿ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಪಂ ಸಿಇಒ ಎನ್.ಹೇಮಂತ್, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ ಸೂರಜ್ ಹೆಗ್ಡೆ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಬಿ.ಬಿ.ಕಾವೇರಿ ಉಪಸ್ಥಿತರಿದ್ದರು. ಶಾಸಕರಾದ ಆರಗ ಜ್ಞಾನೇಂದ್ರ, ಎಸ್.ಎನ್.ಚನ್ನಬಸಪ್ಪ, ಶಾರದಾ ಪೂರ‌್ಯಾನಾಯ್ಕಾ, ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್.ಅರುಣ್, ಡಾ.ಧನಂಜಯ ಸರ್ಜಿ, ಬಲ್ಕಿಶ್ ಬಾನು, ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಮುಂತಾದವರಿದ್ದರು.