

ನೆಲಮಂಗಲ: ಸುಗಮ ಸಂಚಾರಕ್ಕೆ ಸುಸಜ್ಜಿತ ಮುಖ್ಯ ರಸ್ತೆಗಳ ನಿರ್ಮಾಣ ಅಗತ್ಯವಿದೆ ಎಂದು ಶಾಸಕ ಎನ್.ಶ್ರೀನಿವಾಸ್ ಹೇಳಿದರು.
ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮತ್ತು ಮುಖಂಡರೊಂದಿಗೆ ಶುಕ್ರವಾರ ನಗರಸಭೆ ವ್ಯಾಪ್ತಿಯ ಭಿನ್ನಮಂಗಲದಲ್ಲಿ ಮುಖ್ಯರಸ್ತೆಯ ಕಾಮಗಾರಿ ಪರಿಶೀಲಿಸಿ ಮಾತನಾಡಿದರು.
ಸುಮಾರು 9 ಕೋಟಿ ರೂಪಾಯಿ ವೆಚ್ಚದಲ್ಲಿ ಭಿನ್ನಮಂಗಲ ಗ್ರಾಮದಿಂದ ಕುಣಿಗಲ್ ವೃತ್ತದವರೆಗಿನ ನಗರದ ಮುಖ್ಯರಸ್ತೆ ಅಭಿವೃದ್ಧಿ, ಪಾದಚಾರಿ ಮಾರ್ಗ ಉನ್ನತೀಕರಣ, ವಿಮಾನ ನಿಲ್ದಾಣದ ಮಾದರಿಯಲ್ಲಿ ಆಕರ್ಷಕ ವಿದ್ಯುತ್ ದೀಪ (ಡಿಸೈನ್ ಲೈಟ್) ಅಳವಡಿಸಲಾಗುತ್ತಿದೆ. ಬಿನ್ನಮಂಗಲದ ಅಂಡರ್ ಪಾಸ್, ಸಾರ್ವಜನಿಕ ಬಸ್ ನಿಲ್ದಾಣದ ಬಳಿ ರಸ್ತೆ, ತಾಲೂಕು ಕಚೇರಿ, ಬಸವನಹಳ್ಳಿ ಕ್ರಾಸ್‌ನಲ್ಲಿ ಸುಸಜ್ಜಿತ ಹೈಮಾಸ್ಟ್ ಆಳವಡಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ವಿವರಿಸಿದರು.
ಗುಣಮಟ್ಟ ಕಾಪಾಡಿ: ನಗರದ ಅಂದವನ್ನು ಮತ್ತಷ್ಟು ಹೆಚ್ಚಿಸುವ ಉದ್ದೇಶದಿಂದ 13 ಕೋಟಿ ರೂಪಾಯಿ ವೆಚ್ಚದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು. ರಸ್ತೆ ವಿಸ್ತರಣೆ ವೇಳೆ ರಸ್ತೆಯಲ್ಲಿ ಕೆಲ ಮರ, ಗಿಡಗಳನ್ನು ಬಿಟ್ಟಿದ್ದು ಅವುಗಳನ್ನು ತೆರವು ಮಾಡಬೇಕಿದೆ. ಅಧಿಕಾರಿಗಳು ಸ್ಥಳೀಯ
ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗುಣಮಟ್ಟದ ರಸ್ತೆ ನಿರ್ಮಾಣ ಮಾಡಬೇಕು ಎಂದು ಶಾಸಕರು ತಿಳಿಸಿದರು.
ಉದ್ಯಾನವನ ನಿರ್ಮಾಣ: ನಗರದ ಭಿನ್ನಮಂಗಲ ಕೆರೆ ಅಂಚಿನಲ್ಲಿರುವ ಸಾಮಾಜಿಕ ಅರಣ್ಯದ ನರ್ಸರಿಗೆ ಭೇಟಿ ಮಾಡಿದ ಶಾಸಕ ಎನ್. ಶ್ರೀನಿವಾಸ್, ಅರಣ್ಯಾಧಿಕಾರಿಗಳಿಂದ ಮಾಹಿತಿ ಪಡೆದರು. ಅವಕಾಶವಿದ್ದಲ್ಲಿ ಎರಡು ಎಕರೆ ಜಾಗದಲ್ಲಿ ಸುಂದರವಾದ ಉದ್ಯಾನ ನಿರ್ಮಿಸುವುದಾಗಿ ತಿಳಿಸಿದರು. ಪ್ರಭಾರ ವಲಯಾರಣ್ಯಾಧಿಕಾರಿ ರುದ್ರಮೂರ್ತಿ, ಗುರುಮೂರ್ತಿ ಇದ್ದರು. ನಗರಸಭೆ ಸದಸ್ಯರಾದ ಸಿ.ಪ್ರದೀಪ್, ಗಂಗಾಧರ್‌ರಾವ್, ಪೌರಾಯುಕ್ತ ಮನುಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ನಾಗರಾಜು, ಎಸ್ಸಿ ಬ್ಲಾಕ್ ಅಧ್ಯಕ್ಷ ವೆಂಕಟೇಶ್, ಬಿಎಂಟಿಸಿ ಮಾಜಿ ನಿರ್ದೇಶಕ ಮಿಲ್ಟ್ರಿಮೂರ್ತಿ, ಟಿಎಪಿಸಿಎಂಎಸ್ ಅಧ್ಯಕ್ಷ ನರಸಿಂಹಮೂರ್ತಿ ಇದ್ದರು.