

ಹನೂರು : ಮಹದೇಶ್ವರ ಬೆಟ್ಟದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳು ನಿದಾನಗತಿಯಲ್ಲಿ ಸಾಗುತ್ತಿದೆ. ಆದ್ದರಿಂದ ಕೂಡಲೇ ಹೆಚ್ಚಿನ ಸಿಬ್ಬಂದಿ ನಿಯೋಜಿಸಿಕೊಂಡು ಕಾಮಗಾರಿಯನ್ನು ಚುರುಕುಗೊಳಿಸಿ ಶೀಘ್ರ ಪೂರ್ಣಗೊಳಿಸಬೇಕು ಎಂದು ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ. ರಘು ಸೂಚಿಸಿದರು.
ಮಲೆಮಹದೇಶ್ವರ ಬೆಟ್ಟದಲ್ಲಿ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಪ್ರಗತಿಯಲ್ಲಿರುವ ದೊಡ್ಡಕೆರೆ ಅಭಿವೃದ್ಧಿ, ದಾಸೋಹ ಭವನ ನೆಲ ಅಂತಸ್ತು, ಸರತಿ ಸಾಲಿನ ಕಾಮಗಾರಿ, ಮೆಟ್ಟಿಲು ನಿರ್ಮಾಣ ಹಾಗೂ ಇನ್ನಿತರ ಅಭಿವೃದ್ಧಿ ಕಾಮಗಾರಿ ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮಾತನಾಡಿದರು.
ಭಕ್ತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ 386 ವಸತಿ ಗೃಹಗಳ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಕೈಗೊಂಡು ಹಲವು ವರ್ಷಗಳೇ ಕಳೆದಿದೆ. ಆದರೆ ಕಾಮಗಾರಿ ಪೂರ್ಣಗೊಂಡಿಲ್ಲ. ಭಕ್ತರು ದೇವರ ದರ್ಶನ ಪಡೆಯಲು ಕೈಗೊಳ್ಳಲಾಗಿರುವ ಸರತಿ ಸಾಲಿನ ಸಂಕೀರ್ಣ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ. ಜತೆಗೆ ತಾಳುಬೆಟ್ಟದಿಂದ ಮ.ಬೆಟ್ಟದ ಕತ್ತಿ ಪಾವಡದವರೆಗೆ ಕೈಗೊಂಡಿರುವ ಮೆಟ್ಟಿಲು ನಿರ್ಮಾಣ ಕಾಮಗಾರಿಯ ಸ್ಥಿತಿಯೂ ಇದೇ ರೀತಿಯಾಗಿರುವುದು ಎಷ್ಟರ ಮಟ್ಟಿಗೆ ಸರಿ? ಆದ್ದರಿಂದ ಕೂಡಲೇ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಶೀಘ್ರ ಪೂರ್ಣಗೊಳಿಸುವುದರ ಮೂಲಕ ಭಕ್ತರ ಸೇವೆಗೆ ಸರ್ಮಪಿಸಬೇಕು. ದಾಸೋಹ ಭವನದ ನೆಲ ಅಂತಸ್ತಿನ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ತಾಕೀತು ಮಾಡಿದರು.
ದೊಡ್ಡಕೆರೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕು: ಬಳಿಕ ದೇಗುಲದ ನಂದನವನ ಸಮೀಪದಲ್ಲಿ ಪ್ರಗತಿಯಲ್ಲಿರುವ ದೊಡ್ಡಕರೆ ಅಭಿವೃದ್ಧಿ ಕಾಮಗಾರಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದ ಕಾರ್ಯದರ್ಶಿ ಅವರು, ದೊಡ್ಡಕೆರೆಯಲ್ಲಿ ದೀಪಾವಳಿ, ದಸರಾ ಹಾಗೂ ಇನ್ನಿತರ ಜಾತ್ರಾ ವೇಳೆ ಮಾದಪ್ಪನ ಉತ್ಸವ ಮೂರ್ತಿಯ ತೆಪ್ಪೋತ್ಸವ ನಡೆಸಲಾಗುತ್ತಿತ್ತು. ಆದರೆ ಕಾಮಗಾರಿ ಪ್ರಗತಿಯಲ್ಲಿದ್ದು, ನಿಧಾನಗತಿಯಲ್ಲಿ ಸಾಗುತ್ತಿದೆ. ಇದರಿಂದ 2 ವರ್ಷದಿಂದ ತೆಪ್ಪೋತ್ಸವ ಸ್ಥಗಿತಗೊಂಡಿದೆ. ತೆಪ್ಪೋತ್ಸವ ನಡೆಯದಿರುವುದರ ಬಗ್ಗೆ ಭಕ್ತರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಆದ್ದರಿಂದ ವಿಜಯದಶಮಿ ಜಾತ್ರೆಗೂ ಮುನ್ನ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಈ ಬಾರಿ ತೆಪ್ಪೋತ್ಸವ ನಡೆಸಲು ಅನುಕೂಲ ಕಲ್ಪಿಸಬೇಕು. ಈ ಬಗ್ಗೆ ಅಗತ್ಯ ಮುತುವರ್ಜಿ ವಹಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಬಳಿಕ ಭಕ್ತರು ತಂಗಲು 3ನೇ ಹಂತದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಡಾರ್ಮಿಟರಿಯ ಸ್ಥಳ ಪರಿಶೀಲನೆ ನಡೆಸಿದರು. ಮಹದೇಶ್ವರರ ಪ್ರತಿಮೆ ಸ್ಥಳಕ್ಕೆ ತೆರಳಲು ನಿರ್ಮಿಸಿರುವ ಸಿಸಿ ರಸ್ತೆ ಹಾಗೂ ಚರಂಡಿ ಕಾಮಗಾರಿ, ಕೆಆರ್‌ಐಡಿಎಲ್ ವತಿಯಿಂದ ಪ್ರತಿಯಲ್ಲಿರುವ ರಸ್ತೆ ಕಾಮಗಾರಿ ಪರಿಶೀಲಿಸಿ ಶೀಘ್ರ ಪೂರ್ಣಗೊಳಿಸುವಂತೆ ಸೂಚಿಸಿದರು.
ಜಾತ್ರೆಗೆ ಸಿದ್ಧತೆ ಪರಿಶೀಲನೆ: ಮುಂದಿನ ತಿಂಗಳಲ್ಲಿ ಮಹಾಲಯ ಅಮಾವಾಸ್ಯೆ ಹಾಗೂ ವಿಜಯದಶಮಿ ಹಿನ್ನೆಲೆಯಲ್ಲಿ ಮ.ಬೆಟ್ಟಕ್ಕೆ ಲಕ್ಷಾಂತರ ಭಕ್ತರು ಮ.ಬೆಟ್ಟಕ್ಕೆ ಆಗಮಿಸಲಿದ್ದಾರೆ. ಹಾಗಾಗಿ ಅಗತ್ಯ ಮೂಲ ಸೌಕರ್ಯವನ್ನು ಪ್ರಾಧಿಕಾರದ ಆದ್ಯ ಕರ್ತವ್ಯ. ಈ ದಿಸೆಯಲ್ಲಿ ಸಿದ್ಧತೆ ಪರಿಶೀಲನೆ ನಡೆಸಿದರು. ಅಂತರಗಂಗೆಯ ಕಲ್ಯಾಣಿಗೆ ತೆರಳಿ ಸ್ವಚ್ಛತೆ ಕಾಪಾಡುವಂತೆ ಸಿಬ್ಬಂದಿಗೆ ಸೂಚಿಸಿದರಲ್ಲದೇ ಶುಚಿತ್ವ ಸಂಬಂಧ ಭಕ್ತರಲ್ಲಿ ಜಾಗೃತಿ ಮೂಡಿಸಬೇಕು. ಭಕ್ತರು 500 ರೂ. ಟಿಕೆಟ್ ಪಡೆದು ದೇವರ ದರ್ಶನ ಪಡೆಯಲು ತೆರಳುವ ವಿಶೇಷ ಕೌಂಟರ್‌ನಲ್ಲಿ ನೂಕು ನುಗ್ಗಲು ಉಂಟಾಗದಂತೆ ಅಗತ್ಯ ಕ್ರಮವಹಿಸಬೇಕು. ಸಾಮಾನ್ಯ ಸರತಿ ಸಾಲಿನಲ್ಲಿ ಕುಡಿಯುವ ನೀರು, ಗಾಳಿ ಹಾಗೂ ಬೆಳಕು ವ್ಯವಸ್ಥಿತವಾಗಿ ಇರುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.
ಪಿಡಬ್ಯುಡಿ ಎಇಇ ಚಿನ್ನಣ್ಣ, ಜೆಇಗಳಾದ ಮಹೇಶ್, ರಾಕೇಶ್, ಸಂತೋಷ್, ಪ್ರಾಧಿಕಾರದ ಇಂಜಿನಿಯರ್ ಸೆಲ್ವ ಗಣಪತಿ, ಗುತ್ತಿಗೆದಾರರಾದ ಪಾಲಾಕ್ಷಯ್ಯ, ಶೇಖರ್ ಹಾಗೂ ಇನ್ನಿತರರು ಇದ್ದರು.