

ಚಿಕ್ಕಮಗಳೂರು: ಫುಟ್‍ಬಾಲ್ ವೇಗ ಹಾಗೂ ಕೌಶಲ್ಯ ಆಧಾರಿತ ಕ್ರೀಡೆಯಾಗಿದ್ದು, ಜಿಲ್ಲೆಯ ವಾತಾವರಣ ಈ ಕ್ರೀಡೆಗೆ ಪೂರಕವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಚ್.ಅಕ್ಷಯ್ ಹೇಳಿದರು. ಚಿಕ್ಕಮಗಳೂರು ಫುಟ್ಬಾಲ್ ಅಸೋಸಿಯೇಷನ್ ಮತ್ತು ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಫುಟ್ಬಾಲ್ ಅಸೋಸಿಯೇಷನ್‍ನ ಪ್ರಥಮ ಅಧ್ಯಕ್ಷ ದಿ.ಕೆ.ಆರ್.ಗಿರೀಶ್ ಸ್ಮರಣಾರ್ಥ ನಗರದ ಜಿಲ್ಲಾ ಆಟದ ಮೈದಾನದಲ್ಲಿ ಆಯೋಜಿಸಿರುವ ಎರಡು ದಿನಗಳ ರಾಜ್ಯಮಟ್ಟದ ಹೊನಲು ಬೆಳಕಿನ ಫುಟ್ಬಾಲ್ ಪಂದ್ಯಾವಳಿಯನ್ನು ಶನಿವಾರ ಸಂಜೆ ಉದ್ಘಾಟಿಸಿ ಅವರು ಮಾತನಾಡಿದರು.
ವಾರಾಂತ್ಯ ಕ್ರೀಡೆಗೆ ಸ್ಫೂರ್ತಿ:
ವಾರಾಂತ್ಯದಲ್ಲಿ ನಡೆಯುತ್ತಿರುವ ಈ ಪಂದ್ಯಾವಳಿಯಲ್ಲಿ ಆಟಗಾರರು ಸಾಕಷ್ಟು ಸ್ಫೂರ್ತಿ ಪಡೆಯಲು ಅವಕಾಶವಿದೆ ಎಂದರಲ್ಲದೆ ತಾವು ಕೂಡ ಕಾಲೇಜು ಜೀವನದಲ್ಲಿ ಫುಟ್‍ಬಾಲ್ ಸೇರಿದಂತೆ ವಿವಿಧ ಕ್ರೀಡೆಗಳಲ್ಲಿ ಭಾಗಿಯಾಗಿದ್ದ ದಿನಗಳನ್ನು ಸ್ಮರಿಸಿಕೊಂಡರು. ಈ ಜಿಲ್ಲೆಯಲ್ಲಿ ಫುಟ್‍ಬಾಲ್ ಕ್ರೀಡೆಗೆ ಸಂಬಂಧಿಸಿದಂತೆ ಹೊಸ ತಂಡ ರಚನೆ ಮಾಡುವ ಪ್ರಯತ್ನಕ್ಕೆ ಫುಟ್ಬಾಲ್ ಅಸೋಸಿಯೇಷನ್ ಮುಂದಾಗಿರುವುದು ವಿಶೇಷ ಎಂದು ತಿಳಿಸಿದರು.
ಕರೊನಾ: ಪೌರಾಯುಕ್ತರ ಎಚ್ಚರಿಕೆ:
ಪೌರಾಯುಕ್ತ ಬಿ.ಸಿ.ಬಸವರಾಜ್ ಮಾತನಾಡಿ, ಗಿರೀಶ್ ತುಂಬ ಉತ್ತಮ ವ್ಯಕ್ತಿತ್ವ ಹೊಂದಿದ್ದವರು. ಕ್ರೀಡೆಯ ಬಗ್ಗೆ ಆಸಕ್ತಿ ಇದ್ದವರು. ಅವರ ಸ್ಮರಣಾರ್ಥ ಹೊನಲು ಬೆಳಕಿನ ಫುಟ್ಬಾಲ್ ಪಂದ್ಯಾವಳಿ ಆಯೋಜಿಸಿರುವುದು ಸಂತಸದ ಸಂಗತಿ ಎಂದರು. ಕರೊನಾ ಹೆಚ್ಚುತ್ತಿರುವ ಈ ದಿನಗಳಲ್ಲಿ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕಲ್ಲದೆ, ಜಿಲ್ಲೆಯಲ್ಲಿ ನಿತ್ಯ 8, 10, 12 - ಹೀಗೆ ಪ್ರಕರಣಗಳು ಹೆಚ್ಚಾಗುತ್ತಿರುವ ಬಗ್ಗೆ ವರದಿಯಾಗುತ್ತಿದ್ದು, ಅನುಮಾನ ಬಂದವರು ತಕ್ಷಣ ಜಿಲ್ಲಾ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಮಂಜುಳಾ ಹುಲ್ಲಹಳ್ಳಿ, ಪಿಡಬ್ಲ್ಯುಡಿ ನಿವೃತ್ತ ಎಇಇ ಬಸವರಾಜ್, ಚಿಕ್ಕಮಗಳೂರು ಫುಟ್‍ಬಾಲ್ ಅಸೋಸಿಯೇಶನ್ ಅಧ್ಯಕ್ಷ ಸತ್ಯನಾರಾಯಣ್ ಇನ್ನಿತರರಿದ್ದರು.
ಪ್ರಥಮ ಬಾರಿಗೆ ಆಯೋಜನೆ:
ಕ್ರೀಡೆ ಆಯೋಜಿಸಿದ ಬಗ್ಗೆ ಸುದ್ದಿಗಾರರ ಜತೆ ಅಭಿಪ್ರಾಯ ಹಂಚಿಕೊಂಡ ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಕಾರ್ಯದರ್ಶಿ ಎ.ಎಂ.ಸತ್ಯನಾರಾಯಣ್, ಜಿಲ್ಲಾ ಕೇಂದ್ರದಲ್ಲಿ ಇದೇ ಪ್ರಥಮ ಬಾರಿಗೆ ಎರಡು ದಿನಗಳ ರಾಜ್ಯಮಟ್ಟದ ಹೊನಲು ಬೆಳಕಿನ ಫುಟ್ಬಾಲ್ ಪಂದ್ಯಾವಳಿ ಆರಂಭವಾಗಿದ್ದು, ನಗರದ ಕ್ರೀಡಾಪ್ರಿಯರಿಗೆ ಎರಡು ದಿನಗಳ ಕಾಲ ರಸದೌತಣ ಉಣಿಸಲಿದೆ. ಈ ಪಂದ್ಯಾವಳಿಯಲ್ಲಿ ಬೆಂಗಳೂರು, ಮಂಗಳೂರು, ಬೆಳಗಾವಿ, ದಾವಣಗೆರೆ ಮತ್ತು ಸ್ಥಳೀಯ ತಂಡಗಳು ಸೇರಿದಂತೆ ಒಟ್ಟು 30 ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ ಎಂದು ತಿಳಿಸಿದರು.
ನಾಕ್‍ಔಟ್ ಮಾದರಿ ಪಂದ್ಯ:
ಮೊದಲ ದಿನವಾದ ಶನಿವಾರ ಪಂದ್ಯಾವಳಿಗಳು ನಾಕ್‍ಔಟ್ ಮಾದರಿಯಲ್ಲಿ ನಡೆಯುತ್ತಿದ್ದು ಭಾನುವಾರ ಲೀಗ್ ಮಾದರಿಯಲ್ಲಿ ಪಂದ್ಯ ನಡೆಯಲಿದೆ. ಪಂದ್ಯಾವಳಿಯ ಫೈನಲ್‍ನಲ್ಲಿ ವಿಜೇತರಾದವರಿಗೆ ಟ್ರೋಫಿ ಮತ್ತು 40 ಸಾವಿರ ನಗದು ಹಾಗೂ ದ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ ಟ್ರೋಫಿ ಮತ್ತು 20 ಸಾವಿರ ನಗದು ಬಹುಮಾನ ನೀಡಲಾಗುವುದು ಎಂದರು. ಪಂದ್ಯಾವಳಿಯಲ್ಲಿ ಹೆಚ್ಚಿನ ಗೋಲು ಹೊಡೆಯುವ ಆಟಗಾರನಿಗೆ ಮತ್ತು ಅತ್ಯುತ್ತಮವಾಗಿ ಗೋಲು ರಕ್ಷಣೆ ಮಾಡುವ ಗೋಲ್ ಕೀಪರ್ ಹಾಗೂ ಪಂದ್ಯ ಪುರುಷೋತ್ತಮ ಪ್ರಶಸ್ತಿಯ ಜತೆಗೆ ಪಂದ್ಯಾವಳಿಯಲ್ಲಿ ಅತ್ಯುತ್ತಮವಾಗಿ ಆಡುವ ತಂಡಕ್ಕೆ ಫೇರ್ ಪ್ಲೇ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಅವರು ತಿಳಿಸಿದರು.