ಜೈಲಿಗೆ ಹೋಗಿ ಬಂದವರಿಗೆಲ್ಲ ಅಧಿಕಾರ: ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ವಿಷಾದ

Speech by retired Lokayukta Justice N. Santosh Hegde
Published on

ಮಂಡ್ಯ: ಶ್ರೀಮಂತಿಕೆ ಮತ್ತು ಅಧಿಕಾರವನ್ನು ಓಲೈಸುವಂತಹ ಸಮಾಜದಲ್ಲಿ ನಾವು ಇದ್ದೇವೆ. ಜೈಲಿಗೆ ಹೋಗಿ ಬಂದವರಿಗೆ ದೊಡ್ಡ ಅಧಿಕಾರವನ್ನೂ ನೀಡುತ್ತಿದ್ದೇವೆ. ಇದನ್ನು ಪ್ರಶ್ನೆ ಮಾಡಿದರೆ, ಮಹಾತ್ಮ ಗಾಂಧೀಜಿ ಅವರು ಜೈಲಿಗೆ ಹೋಗಿಲ್ಲವೇ ಎನ್ನುವ ಉತ್ತರ ಬರುತ್ತದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ವಿಷಾದಿಸಿದರು.

ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಪಟೇಲ್ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ವೀರಯೋಧ ಆರ್.ಲೋಕೇಶ್ ಪಟೇಲ್ ಜ್ಞಾಪಕಾರ್ಥ ಆಯೋಜಿಸಿದ್ದ ವಿದ್ಯಾರ್ಥಿ ಪುರಸ್ಕಾರ ಪ್ರದಾನ ಮತ್ತು ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

ಸಮಾಜದಲ್ಲಿ ಶ್ರೀಮಂತಿಕೆ ಹಾಗೂ ದೊಡ್ಡ ಹುದ್ದೆಗೆ ಪೈಪೋಟಿ ಶುರುವಾಗಿದೆ. ಯಾವ ಹುದ್ದೆಗೆ ಹೋಗಬೇಕೆನ್ನುವ ಗೊಡವೆಗಳಿಲ್ಲ, ಒಟ್ಟಿನಲ್ಲಿ ಶ್ರೀಮಂತನಾದರೆ ಸಾಕು. ಬೇರೆ ಪ್ರೌವೃತ್ತಿ ಹುಡುಕಿಕೊಂಡು ಹೋಗುವ ಸ್ಥಿತಿಯೂ ಸಮಾಜದಲ್ಲಿ ನಿರ್ಮಾಣವಾಗಿದೆ. ಇದರಿಂದ ಸಮಾಜದಲ್ಲಿ ಶಾಂತಿ ಸೌಹಾರ್ದತೆ ನೆಲೆಸಲು ಸಾಧ್ಯವಿಲ್ಲ. ಜನರಲ್ಲಿ ದುರಾಸೆ ಎಂಬ ರೋಗ ಹುಟ್ಟಿಕೊಂಡಿದೆ. ಆ ರೋಗಕ್ಕೆ ಮದ್ದಿಲ್ಲ. ಇರುವುದೊಂದೇ ದಾರಿ ನಮ್ಮ ಹಿರಿಯರು ಕಟ್ಟಿದ ಮೌಲ್ಯ. ಎಲ್ಲರಲ್ಲಿಯೂ ಆಕಾಂಕ್ಷೆ ಭಾವನೆ ಇರಲಿ. ಆದರೆ ಯಾವ ರೀತಿ ಶ್ರೀಮಂತಿಕೆ ಪಡೆಯಬೇಕು ಎನ್ನುವುದು ಮುಖ್ಯವಾಗಬೇಕು. ಅದು ಮತ್ತೊಬ್ಬರ ಜೇಬಿಗೆ ಕೈಹಾಕುವುದಲ್ಲ, ಪ್ರಾಮಾಣಿಕತೆಯಿಂದ ಕಷ್ಟಪಟ್ಟು ಕಾನೂನು ಚೌಕಟ್ಟಿನಲ್ಲಿ ಪಡೆದ ಸಂಪತ್ತಿನಲ್ಲಿ ಯಾವುದೇ ತಪ್ಪಿಲ್ಲ ಎಂದರು.

ತೃಪ್ತಿ ಎನ್ನುವುದನ್ನು ಯುವಕ ಯುವತಿಯರಿಗೆ ಕಲಿಸಬೇಕು. ಇವತ್ತಿನ ಶಾಲೆಯಲ್ಲಿ ನೀತಿಪಾಠವಿಲ್ಲ. ಎಂತಹ ಸಮಾಜದಲ್ಲಿ ನಾವಿದ್ದೇವೆ. ಜೈಲಿಗೆ ಹೋದ ಮನೆಗೆ ಯಾರೂ ಹೋಗದಂತಹ ಬಹಿಷ್ಕಾರವಿತ್ತು. ಅದು ಆ ಕುಟುಂಬಕ್ಕೂ ಬಹಿಷ್ಕಾರದ ಶಿಕ್ಷೆಯಾಗಿತ್ತು, ಇಂದು ಅದು ಬದಲಾಗಿದೆ. ಜೈಲಿಗೆ ಹೋಗಿ ಬಂದವರು ದೊಡ್ಡ ಹುದ್ದೆಗೆ ಹೋಗುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ಟ್ರಸ್ಟ್‌ನ ಅಧ್ಯಕ್ಷೆ ನಾಗಮ್ಮ, ಕಾರ್ಯದರ್ಶಿ ರಾಜಶೇಖರಯ್ಯ, ಉಪಾಧ್ಯಕ್ಷೆ ಡಿ.ಆರ್.ಕಲಾವತಿ, ಖಜಾಂಚಿ ಎನ್.ಎಸ್.ಕಿರಣ್‌ಗೌಡ, ಧರ್ಮದರ್ಶಿಗಳಾದ ಜಿ.ಬಿ.ಶಿವಕುಮಾರ್, ಲೋಕೇಶ್ ಚಂದಗಾಲು, ಸಿದ್ದರಾಜು ಇತರರಿದ್ದರು.

ಇದೇ ಸಂದರ್ಭದಲ್ಲಿ ಮಿಮ್ಸ್ ನಿವೃತ್ತ ಸಾರ್ವಜನಿಕ ಸಂಪರ್ಕಾಧಿಕಾರಿ ಚ.ಮ.ಉಮೇಶ್, ಬೆಂಗಳೂರು ಒಕ್ಕಲಿಗ ಸಂಘದ ದಂತ ಮಹಾವಿದ್ಯಾಲಯ ಪ್ರಾಂಶುಪಾಲ ಜಿ.ಸಿ.ರಾಜಕುಮಾರ್, ಬಸರಾಳು ಗ್ರಾಮದ ತತ್ವಪದಗಾರರಾದ ತಂಬೂರು ಜವರಯ್ಯ ಮತ್ತು ಬೋರಮ್ಮ ದಂಪತಿಯನ್ನು ಸನ್ಮಾನಿಸಿ ಗೌರವಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net