ಮೈಸೂರಿನಲ್ಲಿ ಹಿಂದು, ಮುಸ್ಲಿಮರಿಂದ ನುಡಿನಮನ

7
Published on

ಮೈಸೂರು: ಕಾಶ್ಮೀರದಲ್ಲಿ ಭಯೋತ್ಪಾದಕರ ಗುಂಡಿಗೆ ಬಲಿಯಾದ ಪ್ರವಾಸಿಗರಿಗೆ ಹಿಂದು ಹಾಗೂ ಮುಸ್ಲಿಮರು ನಗರದಲ್ಲಿ ಶುಕ್ರವಾರ ನುಡಿನಮನ ಸಲ್ಲಿಸಿದರು.

ದೇವರಾಜ ಮಾರುಕಟ್ಟೆ ಬಳಿರುವ ಚಿಕ್ಕ ಗಡಿಯಾರದ ಬಳಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಮತ್ತು ರೆಸ್ಪಾನ್ಸಿಬಲ್ ಸಿಟಿಜನ್ಸ್ ವಾಯ್ಸ್ ವತಿಯಿಂದ ಕರ್ನಾಟಕದ ಮಧುಸೂದನ್‌ರಾವ್, ಮಂಜುನಾಥ್‌ರಾವ್, ಭರತ್‌ಭೂಷಣ್ ನಿಧನಕ್ಕೆ ನುಡಿ ನಮನ ಸಲ್ಲಿಸಿ ಪುಷ್ಪಾರ್ಚನೆ ಮಾಡಲಾಯಿತು.

ಮಾಜಿ ಮೇಯರ್ ಆರೀಫ್ ಹುಸೇನ್ ಮಾತನಾಡಿ, ಇಂತಹ ಘಟನೆಗಳು ಎಲ್ಲಿಯೂ ನಡೆಯಬಾರದು. ಅತಿ ಸೂಕ್ಷ್ಮ ಪ್ರದೇಶವಾದ ಕಾಶ್ಮೀರದಲ್ಲಿ ಹೆಚ್ಚಿನ ಭದ್ರತೆ ಬೇಕಿತ್ತು. ಮೋದಿ ಅವರ ಕೈಯಲ್ಲಿ ದೇಶ ಸುಭದ್ರವಾಗಿದೆ ಎಂದು ಹೇಳುತ್ತಾರೆ. ಆದರೆ ಈ ಘಟನೆ ದೇಶದ ಜನರಲ್ಲಿ ಬೇಸರ ತರಿಸಿದೆ ಎಂದರು.

ಇಂತಹ ಭಯೋತ್ಪಾದಕರು, ಕೃತ್ಯ ನಡೆಸುವವರನ್ನು ಕೂಡಲೇ ಮಟ್ಟಹಾಕಬೇಕು, ದೇಶದೊಳಗೆ ಅಕ್ರಮವಾಗಿ ನುಗ್ಗುವ ನುಸುಳುಕೋರಿಗೆ ತಕ್ಕ ಶಾಸ್ತಿ ಮಾಡಬೇಕು ಎಂದು ಒತ್ತಾಯಿಸಿದರು.

ಮಗ, ಹೆಂಡತಿ ಮುಂದೆ ಗಂಡನನ್ನು ಗುಂಡಿಗೆ ಕೊಲ್ಲುವಾಗ ಹೃದಯಗಳಿಗೆ ಎಷ್ಟು ನೋವಾಗುತ್ತದೆ. ಅನ್ನೋದು ನಿಮ್ಮ ಗಮನಕ್ಕಿರಲಿ, ಇನ್ನು ಮುಂದಾದರೂ ಈ ರೀತಿ ಪ್ರಾಣ ಹಾನಿ ಆಗದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು, ದೇಶದ ಭದ್ರತೆ ದೃಷ್ಟಿಯಿಂದ ಇನ್ನೂ ಮುಂಜಾಗೃತಾ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಂ ಮಾತನಾಡಿ, ಗಡಿಯಾದ ಜಮ್ಮು ಮತ್ತು ಕಾಶ್ಮೀರದಲ್ಲಿ ಮೊದಲಿನಿಂದಲೂ ಸೂಕ್ಷ್ಮ ಪ್ರದೇಶವಾಗಿದೆ. ಇಂತಹ ಕಡೆ ಎಷ್ಟು ಬಿಗಿ ಭದ್ರತೆ ಒದಗಿಸಿದರು ಕೂಡ ಕಡಿಮೆಯೇ. ಆದರೆ ಪ್ರವಾಸಿಗರನ್ನು ಬನ್ನಿ ಎಂದು ಆಕರ್ಷಿಸುವ ಕೇಂದ್ರ ಸರ್ಕಾರ, ಅಲ್ಲಿ ಹೆಚ್ಚಿನ ಭದ್ರತೆ ಕೈಗೊಳ್ಳದಿರುವುದು ಬೇಜವಾಬ್ದಾರಿತನ ಎಂದು ಟೀಕಿಸಿದರು.

ಮೃತಪಟ್ಟ ಕುಟುಂಬಗಳು ಅನಾಥವಾಗಿದೆ, ಮದುವೆಯಾದ ಕೇವಲ ಒಂದು ವಾರಕ್ಕೆ ಯುವಕ ಪ್ರಾಣ ಕಳೆದುಕೊಂಡಿದ್ದಾನೆ. ಭಯೋತ್ಪಾದನೆ ಮಟ್ಟ ಹಾಕಲು ನೀವು ಏನೇ ಕ್ರಮ ಕೈಗೊಂಡರೂ ಪ್ರತಿಯೊಬ್ಬ ಭಾರತೀಯನೂ ಕೈಜೋಡಿಸುತ್ತಾನೆ. ಇನ್ನು ಮುಂದಾದರು ಈ ರೀತಿಯ ಅವಘಡಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕಿದೆ ಎಂದು ಒತ್ತಾಯಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್, ಮುಖಂಡರಾದ ಎಫ್.ಎಂ. ಕಲೀಮ್, ಜಾವಿದ್ ಪಾಷ, ಕೆ.ರಘುರಾಮ್ ವಾಜಪೇಯಿ, ಲೋಕೇಶ್ ಮಾದಾಪುರ, ಮೊಗಣ್ಣ, ಅಸದುಲ್ಲ, ಎನ್. ಭಾಸ್ಕರ್, ದ್ಯಾವಪ್ಪ ನಾಯಕ, ಬಗವಾದಿ ನಾರಾಯಣಪ್ಪ, ಅಕ್ರಂ, ಸಿಂಧುವಳ್ಳಿ ಅಕ್ಬರ್, ಆಜಾದ್ ಪಾಷ, ಶಿವಶಂಕರ ಮೂರ್ತಿ, ಮಂಜುಳಾ ಸೌಂಡ್ಸ್‌ನ ರೋಹಿತ್, ದೀಪಕ್, ಶಿಂಷ ದಿನೇಶ್, ರಾಜೇಶ್, ರವಿ ನಾಯಕ್, ಕೇಶವ್, ಇಬ್ರೀಷ್ ಮೋಹನ್, ಶೋಭಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net