ನಮ್ಮನ್ನು ಎಂದಿಗೂ ರಕ್ಷಿಸುತ್ತದೆ ಪರಂಪರೆ

hrr shree
Published on

ಹರಿಹರ: ಪರಂಪರೆಯನ್ನು ನಾವು ರಕ್ಷಣೆ ಮಾಡಿದರೆ ನಮ್ಮನ್ನು ಪರಂಪರೆ ರಕ್ಷಿಸುತ್ತದೆ ಎಂದು ಹಿಮತ್ಕೇದಾರ ಭೀಮಾಶಂಕರಲಿಂಗ ಶ್ರೀಗಳು ಹೇಳಿದರು.

ತಾಲೂಕಿನ ಶಿವನಹಳ್ಳಿ ಗ್ರಾಮದ ದಕ್ಷಿಣ ಕೇದಾರ ವೈರಾಗ್ಯಧಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ದಾಸೋಹ ಭವನ, ಭಕ್ತ ಭವನ, ಸಭಾ ಭವನಗಳ ಲೋಕಾರ್ಪಣೆ, ಸಂಗೀತಯುಕ್ತ ಇಷ್ಟಲಿಂಗ ಮಹಾಪೂಜೆ ಹಾಗೂ ಪರಂಪರೆ ರಕ್ಷಣಾ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಮನುಷ್ಯನು ಜೀವಿತಾವಧಿಯಲ್ಲಿ ಎಷ್ಟೇ ಸಂಪತ್ತು ಗಳಿಸಿದರೂ ಮಾನಸಿಕ ನೆಮ್ಮದಿ ಇರುವುದಿಲ್ಲ, ಪೂಜಾ ಪಾಠ ದಿಂದ ಮಾತ್ರ ಮನಸ್ಸಿಗೆ ಸಮಾಧಾನ ಸಿಗಲಿದೆ. ತನು-ಮನ-ಧನದಿಂದ ಪರಿಪೂರ್ಣವಾಗಿ ಮಾಡಿದ ಸೇವೆ ಸಾರ್ಥಕವಾಗುತ್ತದೆ ಎಂದರು.

ಹಣ, ಅಧಿಕಾರದ ಹಿಂದೆ ಹೋದ ಮನುಷ್ಯ ಧರ್ಮ, ಸಂಸ್ಕೃತಿಯ ಆಚರಣೆ ಬಗೆಗೆ ನಿರ್ಲಕ್ಷ್ಯ ಮನೋಭಾವ ತಾಳುತ್ತಿರುವುದು ನೋವಿನ ಸಂಗತಿ. ಸತ್ಯ ಸೈದ್ಧಾಂತಿಕ ಚಿಂತನೆಗಳ ಕೊರತೆಯಿಂದಾಗಿ ಕೆಲವರು ಕವಲು ದಾರಿಯಲ್ಲಿ ಸಾಗುತ್ತಿದ್ದಾರೆ. ಧರ್ಮ ಪೀಠಗಳ ಮಾರ್ಗದರ್ಶನ ಇಂದು ಬಹಳಷ್ಟು ಅಗತ್ಯವಿದೆ ಎಂದರು.

ಮನುಷ್ಯನ 60 ವರ್ಷ ಜೀವಿತಾವಧಿಯಲ್ಲಿ 30 ವರ್ಷ ನಿದ್ದೆ, 15 ವರ್ಷ ಉದ್ಯೋಗ, 5 ವರ್ಷ ಅನಾರೋಗ್ಯ, 5 ವರ್ಷ ಹರಟೆ, 1 ವರ್ಷ ಬಾಲ್ಯಾವಸ್ಥೆ, 1 ವರ್ಷ ವೃದ್ಯಾಪ್ಯದಲ್ಲಿ ಕಳೆಯುತ್ತಾನೆ, ಉಳಿಯುವ 3 ವರ್ಷಗಳಲ್ಲಿ ಧರ್ಮ ಕಾರ್ಯ ಮಾಡಿದರೆ ಮಾನವ ಜನ್ಮಕ್ಕೆ ಮುಕ್ತಿ ಸಿಗುತ್ತದೆ. 2025 ರ ಡಿ.22ರೊಳಗೆ ಕೇದಾರನಾಥನ ಚಿಕ್ಕ ಮಂದಿರವನ್ನು ನಿರ್ಮಾಣ ಮಾಡುವ ಮೂಲಕ ಕೇದಾರನಾಥ ದರ್ಶನ ಮಾಡುವ ಸೌಭಾಗ್ಯ ಭಕ್ತರಿಗೆ ಸಿಗುವಂತಾಗಲಿ ಎಂದರು.

ಮಹಾರಾಷ್ಟ್ರದ ನಾಂದೇಡದಲ್ಲಿ 2025ರ ಡಿ.1 ರಿಂದ 8ರವರೆಗೆ ವಿಶ್ವ ಶಾಂತಿ ಮಹಾಯಾಗವನ್ನು ಹಮ್ಮಿಕೊಳ್ಳಲಾಗಿದ್ದು ಮೈಸೂರಿನ ಮಹಾರಾಜರು ಸೇರಿ 3 ಜನ ಮಹಾರಾಜರು ಹಾಗೂ ದೇಶದ ಪ್ರಧಾನ ಮಂತ್ರಿಗಳು ಪೂರ್ಣಹುತಿಯಲ್ಲಿ ಭಾಗಿಯಾಗಲಿದ್ದಾರೆ ಎಂದರು.

ಕಣ್ವಕುಪ್ಪಿ ಹಿರೇಮಠದ ಡಾ. ನಾಲ್ವಡಿ ಶಾಂತಲಿಂಗ ಶ್ರೀ ಮಾತನಾಡಿ, ಮನುಷ್ಯ ಜೀವನದಲ್ಲಿ ಧರ್ಮ, ತತ್ವ, ಸಿದ್ಧಾಂತ, ಪರಂಪರೆ ಜತೆ ಕೈಜೋಡಿಸಿದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ ಎಂದರು.

ಭಕ್ತರ ಸಂಪತ್ತು, ಹಣ, ಸುಖವನ್ನು ಪಡೆಯುವವನು ನಿಜವಾದ ಗುರುವಲ್ಲ, ಯಾರು ಭಕ್ತರ ದುಃಖ, ಪಾಪ, ಶಾಪ,ನೋವು, ಸಂಕಷ್ಟ, ಶಾರೀರಿಕ ದೌರ್ಬಲ್ಯಗಳಿಗೆ ಮುಕ್ತಿ ನೀಡುತ್ತಾರೋ ಅವರು ನಿಜವಾದ ಗುರುವಾಗಲು ಸಾಧ್ಯ. ಇದಕ್ಕೆ ಹಿಮತ್ಕೇದಾರ ಭೀಮಾಶಂಕರಲಿಂಗ ಶ್ರೀಗಳೇ ಸಾಕ್ಷಿ ಎಂದರು.

ಶಾಸಕ ಬಿ.ಪಿ. ಹರೀಶ್ ಸೇರಿ ಸಾವಿರಾರು ಭಕ್ತರು ಶ್ರೀಗಳ ದರ್ಶನ ಪಡೆದು ಆಶೀರ್ವಾದ ಪಡೆದುಕೊಂಡರು. ಸಮಾರಂಭಕ್ಕೆ ಆಗಮಿಸಿದ್ದ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net