ಬೆಣ್ಣೆಯಂತಿರಬೇಕು ಮಾತು, ಮನಸ್ಸು

30 HHR p 1
ಉತ್ತರಾದಿ ಮಠದ ಶ್ರೀಗಳ ಜತೆ ಹೊಳೆಹೊನ್ನೂರಿನಲ್ಲಿ ಚಾತುರ್ಮಾಸ್ಯ ಸಭಾ ಮಂಟಪದಲ್ಲಿ ಹರಿದಾಸ ಲಹರಿ ನಡೆಸಿಕೊಟ್ಟ ಮೈಸೂರಿನ ಸುಮುಖ ಮೌದ್ಗಲ್ಯ ಮತ್ತು ತಂಡದವರು.
Published on

ಹೊಳೆಹೊನ್ನೂರು: ಮತ್ತೊಬ್ಬರ ದುಃಖಕ್ಕೆ ಮರಗುವ ಹಾಗೂ ಮತ್ತೊಬ್ಬರಿಗೆ ದುಃಖಕೊಡದ ವ್ಯಕ್ತಿಗಳ ಮನಸ್ಸು ದೇವರಿಗೆ ಬಹಳ ಪ್ರಿಯಕರ. ಮಾತು ಮತ್ತು ಮನಸ್ಸು ಬೆಣ್ಣೆಯಂತೆ ಇರಬೇಕು ಎಂದು ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥರು ಹೇಳಿದರು.

28ನೇ ಚಾತುರ್ಮಾಸ್ಯದಲ್ಲಿ ಅನುಗ್ರಹ ಸಂದೇಶ ನೀಡಿದ ಶ್ರೀಗಳು, ಕೆನೆ ಮೊಸರನ್ನು ಮಥನ ಮಾಡಿದಾಗ ಬೆಣ್ಣೆ ಬರುತ್ತದೆ. ಅದೇ ರೀತಿ ವೇದಗಳೆಂಬ ಕ್ಷೀರಸಾಗರವನ್ನು ಮಥನ ಮಾಡಿ ಬ್ರಹ್ಮಸೂತ್ರಗಳನ್ನು ದೇವರು ನಮಗೆ ಕೊಟ್ಟಿದ್ದಾನೆ. ಇಂತಹ ತತ್ವಜ್ಞಾನದಿಂದ ಅನಂತ ಸುಖವಿದೆ. ಎಲ್ಲ ಶಾಸ್ತ್ರಗಳು ಅಮೃತ ಕಲಶಗಳಿದ್ದಂತೆ. ಎಲ್ಲರಿಗೂ ಸುಲಭವಾಗಿ ಅರ್ಥವಾಗುವುದು ಕಷ್ಟ. ದೇವರು ಹೇಳಿದ ರೀತಿಯಲ್ಲಿ ನಾವು ಅರ್ಥ ಮಾಡಿಕೊಳ್ಳಬೇಕು ಎಂದರು.
ಅನೇಕ ಸಂದರ್ಭಗಳಲ್ಲಿ ದೇವರಲ್ಲಿ ದೋಷವಿದೆ ಎಂಬಂತೆ ಕಾಣುತ್ತದೆ. ಅದನ್ನೇ ಸತ್ಯವೆಂದು ಭಾವಿಸಿಬಿಟ್ಟರೆ ಯಾವ ಪ್ರಯೋಜನ ಇಲ್ಲ. ಅದರಿಂದ ತಮಸ್ಸಾಧನ ಆಗುತ್ತದೆ. ಹೀಗೆ ಆಗಬಾರದು ಎಂದರೆ ಶ್ರೀಮದಾಚಾರ್ಯರ (ಮಧ್ವಾಚಾರ್ಯರು) ಮುಖೇನ ನಾವು ಶಾಸ್ತ್ರಗಳನ್ನು ನೋಡಬೇಕು. ಆಚಾರ್ಯರು ಮಥನ ಮಾಡಿ ನಮಗೆ ಬೆಣ್ಣೆಯಂತೆ ಶುದ್ಧವಾದ, ಸತ್ಯವಾದ ಜ್ಞಾನವನ್ನು ನೀಡಿದ್ದಾರೆ ಎಂದರು.
ಬೆಂಗಳೂರಿನ ಶ್ರೀ ಜಯತೀರ್ಥ ವಿದ್ಯಾಪೀಠದ ಕುಲಪತಿಗಳಾದ ಗುತ್ತಲ ರಂಗಾಚಾರ್ಯ, ಶ್ರೀ ಮಠದ ದಿವಾನರಾದ ಶಶಿ ಆಚಾರ್ಯ, ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷ ನವರತ್ನ ಸುಬ್ಬಣ್ಣಾಚಾರ್ಯ, ಪಂಡಿತರಾದ ನವರತ್ನ ಶ್ರೀನಿವಾಸಾಚಾರ್ಯ, ನವರತ್ನ ಪುರುಷೋತ್ತಮಾಚಾರ್ಯ, ರಘೂತ್ತಮಾಚಾರ್ಯ ಸಂಡೂರು, ಅನಿಲ್ ರಾಮಧ್ಯಾನಿ, ಮುರಳಿ, ಧೃವಾಚಾರ್, ಗೋಪಿನಾಥ ನಾಡಿಗ್, ಗುರುರಾಜ ಕಟ್ಟಿ ಇತರರಿದ್ದರು.
ಚಾತುರ್ಮಾಸ್ಯ ಸಭಾ ಮಂಟಪದಲ್ಲಿ ಮಂಗಳವಾರ ಋಗ್ವೇದ ಹಾಗೂ ಬುಧವಾರ ಯಜುರ್ವೇದ ನಿತ್ಯ ಮತ್ತು ನೂತನ ಉಪಾಕರ್ಮಗಳು ನೆರವೇರಿದವು. ನೂರಾರು ಜನರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net