

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರು ದೀಪಾಲಂಕಾರದಿಂದ ಮಿನುಗುತ್ತಿದೆ. ಬೆಳಕಿನ ಸಿಂಗಾರಕ್ಕೆ ನೋಡಗರು ಮನಸೋತರು.
ಇಂಧನ ಇಲಾಖೆ ಮತ್ತು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ(ಸೆಸ್ಕ್) ವತಿಯಿಂದ ನಗರದ ಪ್ರಮುಖ ರಸ್ತೆ, ವೃತ್ತ, ಪ್ರತಿಕೃತಿಗಳಿಗೆ ದೀಪಾಲಂಕಾರ ಮಾಡಲಾಗಿದೆ. ಕೆ.ಆರ್.ಆಸ್ಪತ್ರೆ ಎದುರಿನ ಸಯ್ಯಜಿರಾವ್ ರಸ್ತೆಯಲ್ಲಿ ನಿರ್ಮಿಸಿರುವ ದೀಪ ಹಸಿರು ಚಪ್ಪರವನ್ನು ಇಂಧನ ಸಚಿವ ಕೆ.ಜೆ.ಜಾರ್ಜ್ ಉದ್ಘಾಟಿಸುತ್ತಿದ್ದಂತೆ ವಿದ್ಯುತ್ ದೀಪಾಲಂಕಾರ ಎಲ್ಲೆಡೆ ಪ್ರಜ್ವಲಿಸಲು ಶುರು ಮಾಡಿತು.
ದಸರಾ ಮುಗಿದ ಬಳಿಕವೂ ದೀಪಾಲಂಕಾರ ಇರಲಿದೆ. ಮುಂದಿನ 21 ದಿನಗಳ ಕಾಲ ದೀಪಗಳು ಬೆಳಗಲಿವೆ. ಚಾಮುಂಡಿಬೆಟ್ಟದಲ್ಲಿ ಚಾಮುಂಡೇಶ್ವರಿ ರಥೋತ್ಸವ, ತಪ್ಪೋತ್ಸವ ಒಳಗೊಂಡಂತೆ ಸೆ.4ರವರೆಗೂ ವಿದ್ಯುತ್ ದೀಪಾಲಂಕಾರ ಇರಲಿದೆ ಎಂದು ಸಚಿವರು ತಿಳಿಸಿದರು.
ನಗರದಲ್ಲಿ ಜನರ ಮತ್ತು ವಾಹನಗಳ ದಟ್ಟಣೆ ತಪ್ಪಿಸಲು, ಪ್ರವಾಸಿಗರ ಅನುಕೂಲಕ್ಕಾಗಿ ದೀಪಾಲಂಕಾರ ವೇಳೆಯನ್ನು ಸಂಜೆ 7ರಿಂದ 10ರ ವರೆಗೆ ನಿಗದಿಪಡಿಸಲಾಗಿದೆ. ಈ ಮೂಲಕ ದೀಪಾಲಂಕಾರ ವೀಕ್ಷಿಸಿ ಆನಂದಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ ಎಂದು ತಿಳಿಸಿದರು.
ಈ ಸಲ ನಗರದಲ್ಲಿ 120 ಕಿ.ಮೀ., 98 ವೃತ್ತಗಳು, 27 ಇತರ, 59 ವಿವಿಧ ಪ್ರತಿಕೃತಿಗಳಿಗೆ ದೀಪಾಲಂಕಾರ ಮಾಡಲಾಗಿದೆ. ಇದಕ್ಕಾಗಿ 6.15 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ ಎಂದು ಮಾಹಿತಿ ನೀಡಿದರು. ಶಾಸಕರಾದ ತನ್ವೀರ್ ಸೇಠ್, ಕೆ.ಹರೀಶ್‌ಗೌಡ, ಡಿ.ರವಿಶಂಕರ್, ಅನಿಲ್‌ಚಿಕ್ಕಮಾದು ಇನ್ನಿತರರಿದ್ದರು.