

ತುಮಕೂರು: ವಿಧಾನಸಭೆಯಲ್ಲಿ ಕೋಲಾಹಲಕ್ಕೆ ಕಾರಣವಾಗಿದ್ದ ಹನಿಟ್ರ್ಯಾಪ್ ಪ್ರಕರಣದ ಬಗ್ಗೆ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್ ನ್ಯಾಯಮೂರ್ತಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸುವಂತೆ ಮಾಜಿ ಸಚಿವ ಸೊಗಡು ಶಿವಣ್ಣ ಒತ್ತಾಯಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ಹನಿಟ್ರ್ಯಾಪ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ರಾಜಕಾರಣಿಗಳು, ಉದ್ಯಮಿಗಳು ಹಾಗೂ ಮಠಾಧೀಶರನ್ನು ಗುರಿಯಾಗಿಸಿ ಅವರ ಹೆಸರಿಗೆ ಕಳಂಕ ತರುವ ಹೇಯ ಕೃತ್ಯವಾಗಿದೆ. ಇಂತಹ ಕೆಲವು ಪ್ರಕರಣಗಳಲ್ಲಿ ಕೆಲವು ರಾಜಕಾರಣಿಗಳು ಕುಮ್ಮಕ್ಕು ನೀಡುತ್ತಿದ್ದು ಇದರ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರನ್ನು ಬಯಲಿಗೆಳಯಬೇಕು ಎಂದರು.
ಸುಪ್ರೀಂಕೋರ್ಟ್ ಅಥವಾ ಹೈಕೋರ್ಟ್ ನ್ಯಾಯಮೂರ್ತಿಗಳ ಮಾರ್ಗದರ್ಶನದಲ್ಲಿ ಡಿಜಿಪಿ ಮಟ್ಟದ ಉನ್ನತ ಅಧಿಕಾರಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಿ, ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಅದರ ವರದಿ ಸೋರಿಕೆ ಆಗದಂತೆ ಗೌಪ್ಯತೆ ಕಾಪಾಡಿಕೊಂಡು 6 ತಿಂಗಳ ಒಳಗಾಗಿ ತನಿಖಾ ವರದಿ ಸಲ್ಲಿಸಬೇಕು. ಅದರನ್ವಯ ವಿಚಾರಣೆ ನಡೆಸಿ ಹನಿಟ್ರ್ಯಾಪ್ನ ಭಾಗಿಯಾಗಿರುವ ತಪ್ಪಿತಸ್ಥರಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.
ಹನಿಟ್ರ್ಯಾಪ್ ಗಂಭೀರ ಸ್ವರೂಪದ ಅಪರಾಧಿಕ ನಂಬಿಕೆ ದ್ರೋಹವೆನಿಸಿದೆ. ಇದು ಕಾನೂನಿನ ಅಡಿಯಲ್ಲಿ ಜೀವಾವಧಿ ಶಿಕ್ಷೆ ವಿಧಿಸಬಹುದಾದ ಅಪರಾಧವಾಗಿರುತ್ತದೆ. ಹನಿಟ್ರ್ಯಾಪ್ ಮಾಡಿ ಅಕ್ರಮವಾಗಿ ಹಣ ಸಂಪಾದಿಸುವ ಕಾನೂನುಬಾಹಿರ ಕೃತ್ಯಗಳಲ್ಲಿ ಕೆಲವು ಬಲಿಷ್ಠ ರಾಜಕಾರಣಿಗಳು, ಕೆಲವು ಪೊಲೀಸರು, ಕೆಲ ಪತ್ರಕರ್ತರು ಹಾಗೂ ದಾರಿತಪ್ಪಿದ ಸಮಾಜಘಾತುಕ ಶಕ್ತಿಗಳು ಹನಿಟ್ರಾ$್ಯಪ್ನಂತಹ ಗಂಭೀರ ಅಪರಾಧ ಪ್ರಕರಣಗಳಲ್ಲಿ ತೊಡಗಿಕೊಳ್ಳುವ ಮೂಲಕ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂತಹ ಕೃತ್ಯಗಳಲ್ಲಿ ಸಕ್ರಿಯವಾಗಿರುವುದು ಕಂಡುಬಂದಿದೆ ಎಂದು ಶಿವಣ್ಣ ತಿಳಿಸಿದರು.
ಆರೋಪಿತರು, ರಾಜಕಾರಣಿಗಳು, ಅವರ ಕುಟುಂಬದವರು, ಸರ್ಕಾರಿ ಅಧಿಕಾರಿಗಳು, ಇವರ ಕುಟುಂಬದವರನ್ನು, ಮಠಾಧೀಶರು, ಚಿನ್ನದ ಅಂಗಡಿ ಮಾಲೀಕರು, ನ್ಯಾಯಾಧೀಶರು, ನ್ಯಾಯವಾದಿಗಳು, ಶ್ರೀಮಂತ ಉದ್ಯಮಿಗಳು ಹೀಗೆ ಹಲವರನ್ನು ಗುರಿಯಾಗಿಸಿಕೊಂಡು ಕಾನೂನುಬಾಹಿರ ಕೃತ್ಯಗಳಲ್ಲಿ ತೊಡಗಿಕೊಂಡಿರುತ್ತಾರೆ. ರಾಜ್ಯದಲ್ಲಿ ಹನಿಟ್ರ್ಯಾಪ್ ಒಂದು ಕ್ರಿಮಿನಲ್ ಉದ್ಯಮವಾಗಿ ಬೆಳೆಯುತ್ತಿದೆ. ಇದರಲ್ಲಿ ತೊಡಗಿಕೊಂಡಿರುವ ಕ್ರಿಮಿನಲ್ಗಳು ಅಪರಾಧಿಕ ಒಳಸಂಚು ಮಾಡುವ ಮೂಲಕ ವಂಚನೆ, ಜೀವ ಬೆದರಿಕೆ, ಅಪಹರಣ, ಮಾರಣಾಂತಿಕ ಹಲ್ಲೆ, ಕೊಲೆ, ಹಣ ಸುಲಿಗೆ ಮಾಡುವುದು ಮುಂತಾದ ಗಂಭೀರ ಅಪರಾಧಗಳನ್ನು ಎಸಗಲು ಕೆಲವು ರಾಜಕಾರಣಿಗಳ ಕುಮ್ಮಕ್ಕು ಇದೆ ಎಂದರು.
ಹನಿಟ್ರ್ಯಾಪ್ ಪ್ರಕರಣ ತನಿಖೆಗಾಗಿ ಸುಪ್ರೀಂ ಕೊರ್ಟ್ ಮುಖ್ಯ ನ್ಯಾಯಾಧೀಶ ಸಂಜೀವ್ ಖನ್ನಾ ಅವರಿಗೆ ಪತ್ರ ಬರೆದಿದ್ದೇನೆ. ಈ ಸಂಬಂಧ ಸಿಎಂ, ಗೃಹ ಸಚಿವರಿಗೂ ಮನವಿ ಸಲ್ಲಿಸಿ, ಮುಖ್ಯ ಕಾರ್ಯದರ್ಶಿಗಳಿಗೆ ಹಾಗು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವುದಾಗಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಸುದ್ದಿಗೋಷ್ಠಿಯಲ್ಲಿ ನಗರ ಪಾಲಿಕೆ ಮಾಜಿ ಸದಸ್ಯ ಕೆ.ಪಿ.ಮಹೇಶ್, ಕನ್ನಡ ಸೇನೆ ಜಿಲ್ಲಾಧ್ಯಕ್ಷ ಧನಿಯಾಕುಮಾರ್, ಜಿಲ್ಲಾ ವಕ್ಫ್ ಬೋರ್ಡ್ ಉಪಾಧ್ಯಕ್ಷ ಶಬ್ಬೀರ್ ಆಹ್ಮದ್, ಅಂಬೇಡ್ಕರ್ ಪ್ರಚಾರ ಸಮಿತಿ ಒಬಿಸಿ ಜಿಲ್ಲಾಧ್ಯಕ್ಷ ಎಸ್.ರಾಮಚಂದ್ರರಾವ್, ರಾಜ್ಯ ರೈತ ಸಂಘ ಕಾರ್ಯದರ್ಶಿ ಎಸ್.ಬಸವರಾಜು ಹಾಜರಿದ್ದರು.