ಸಾಧನೆಗೆ ರ್ನಿದಿಷ್ಠ ಗುರಿ ಮುಖ್ಯ

FotoJet (6)
Published on

ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಮುರಳೀಧರ ಹಾಲಪ್ಪ ಹೇಳಿಕೆ

 ಚಿಕ್ಕನಾಯಕನಹಳ್ಳಿ: ಒಕ್ಕಲಿಗ ಸಮುದಾಯದವರು ಎಲ್ಲ ಕ್ಷೇತ್ರದಲ್ಲೂ ಸಾಧನೆ ಮಾಡಿದ್ದಾರೆ. ತಾವು ಬೆಳೆಯಬೇಕು, ತಮ್ಮ ಜತೆಯಲ್ಲಿ ಇರುವವರನ್ನು ಬೆಳೆಸುವ ಮೂಲಕ ಇನ್ನೊಬ್ಬರಿಗೆ ಮಾದರಿಯಾಗಬೇಕು ಎಂದು ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಮುರಳೀಧರ ಹಾಲಪ್ಪ ತಿಳಿಸಿದರು.

2024-&25ನೇ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ದ್ವೀತಿಯ ಪಿಯು ಪರೀೆಯಲ್ಲಿ ಹೆಚ್ಚು ಅಂಕ ಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪಟ್ಟಣದ ತೀ.ನಂ.ಶ್ರೀ ಸಭಾಂಗಣದಲ್ಲಿ ತಾಲೂಕು ಒಕ್ಕಲಿಗರ ಸಮುದಾಯದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಮಾತನಾಡಿ, ಎಲ್ಲ ಕ್ಷೇತ್ರಗಳಲ್ಲೂ ಹೆಣ್ಣು ಮಕ್ಕಳೇ ಮುಂದಿದ್ದಾರೆ. ಅದಕ್ಕೆ ಉದಾಹರಣೆಯಾಗಿ ತುಮಕೂರಿಗೆ ಮಹಿಳಾ ಜಿಲ್ಲಾಧಿಕಾರಿಯಾಗಿ ಬಂದಿದ್ದಾರೆ. ಅವರಂತೆ ಈಗಿನ ವಿದ್ಯಾರ್ಥಿಗಳು ಸಹ ಒಂದು ಗುರಿಯನ್ನಿಟ್ಟುಕೊಂಡರೆ ಸಾಧನೆ ಮಾಡಬೇಕು. ಸಾಧನೆಗೆ ರ್ನಿದಿಷ್ಠ ಗುರಿ ಮುಖ್ಯ. ಬೆಂಗಳೂರಿನಲ್ಲಿ ಒಕ್ಕಲಿಗ ಅಭಿವೃದ್ಧಿ ನಿಗಮವಿದೆ, ಅಲ್ಲಿ ದೊರೆಯುವ ಸೌಲಭ್ಯಗಳನ್ನು ಬಳಸಿಕೊಳ್ಳಿ, ಹೊರ ದೇಶಕ್ಕೆ ಹೋಗಬೇಕಾದರೆ ಸಹಾಯದ ಮೊತ್ತವೂ ದೊರಕಲಿದೆ ಎಂದು ಮಾಹಿತಿ ನೀಡಿದರು.

ತಾಲೂಕು ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ ಡಾ.ಎಸ್​.ಜಿ.ಪರಮೇಶ್ವರಪ್ಪ ಮಾತನಾಡಿ, ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಇರುವವರಿಗೆ ಇದು ಮೊದಲನೇ ಹೆಜ್ಜೆ. ಆದರೆ ಇದೇ ಅಂತಿಮವಲ್ಲ. ನೀವು ಅಂಕಗಳಿಸಿರುವುದಕ್ಕೆ ನಾವು ಶ್ಲಾಘಿಸುತ್ತೇವೆ, ನಿಮ್ಮ ಮುಂದಿನ ಗುರಿ ದೊಡ್ಡದಾಗಿರಬೇಕು, ನಿಮ್ಮ ಶ್ರಮವೇ ನಿಮ್ಮ ಸಾಧನೆಯನ್ನು ತೋರ್ಪಡಿಸುತ್ತದೆ. ಮಕ್ಕಳಲ್ಲಿ ಸಾಧಿಸುವ ಛಲ, ಬೆಳೆಯುವ ಗುಣ ಇರಬೇಕು. ವಿದ್ಯಾರ್ಥಿಗಳ ಬೆಳವಣಿಗೆಗೆ ಪಾಲಕರ ಹಾಗೂ ಶಿಕ್ಷಕರ ಬೆಂಬಲ ಜತೆಗೆ ಶ್ರಮವೂ ಇರಬೇಕು. ತಾಲೂಕು ಒಕ್ಕಲಿಗರ ಸಂಘ ಪ್ರತಿವರ್ಷ ಇಂತಹ ಕಾರ್ಯಕ್ರಮ ಮಾಡಲಿ. ಸಮುದಾಯ ಭವನ ನಿಮಾರ್ಣವಾದರೆ ನಾವೂ ಸಹ ಸಹಕಾರ ಮಾಡುತ್ತೇವೆ ಎಂದು ತಿಳಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್​.ಕಾಂತರಾಜು ಮಾತನಾಡಿ, ವಿದ್ಯಾರ್ಥಿಗಳು ಮುಂದೆ ಬರಬೇಕಾದರೆ ಅವರಿಗೆ ಮಾರ್ಗದರ್ಶನ ಅಗತ್ಯ. ತಾವು ಓದಿದ ವಿದ್ಯಾಭ್ಯಾಸಕ್ಕೆ ತಕ್ಕಂತ ಉದ್ಯೋಗ ಸಿಗಬೇಕಿದೆ. ನಾನೂ ಸಹ ಸರ್ಕಾರಿ ಶಾಲೆಯಲ್ಲಿ ಇದೇ ತಾಲೂಕಿನಲ್ಲಿ ಓದಿ ಉದ್ಯೋಗ ಪಡೆದವನು. ಈಗ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿದ್ದೇನೆ. ನಾನೂ ಬಹಳ ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿ ಈ ವೇದಿಕೆ ಮೇಲೆ ನಿಂತಿದ್ದೇನೆ ಎಂದರೆ ಅದಕ್ಕೆ ಶ್ರಮವೇ ಹೆಚ್ಚು ಎಂದರು.

ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ಆರ್​.ಹರ್ಷ ಮಾತನಾಡಿ, ತಾಲೂಕು ಒಕ್ಕಲಿಗರ ಸಂಘ ನಿಮ್ಮ ಜತೆ ಎಂದಿಗೂ ನಿಲ್ಲುತ್ತದೆ. ವಿದ್ಯಾರ್ಥಿಗಳು ಎಂದಿಗೂ ಸಾಧನೆ ಕಡೆ ಗಮನ ನೀಡಿ, ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಸಂಘಟನೆಯ ಎಲ್ಲರೂ ನಿಮ್ಮ ಜತೆ ನಿಲ್ಲುತ್ತಾರೆ. ಮುಂದಿನ ಐದು ವರ್ಷಗಳಲ್ಲಿ ಒಕ್ಕಲಿಗ ಸಮುದಾಯದ ಸಮುದಾಯ ಭವನ ನಿಮಾರ್ಣ ಮಾಡುತ್ತೇವೆ. ಭವನ ನಿಮಾರ್ಣಕ್ಕೆ ನೈತಿಕವಾಗಿ ಸಮುದಾಯದ ಜನರು ನಿಂತರೆ ನಾವು ಎಲ್ಲವನ್ನೂ ಸಾಧಿಸುತ್ತೇವೆ ಎಂದರು.

ಮನವಿ ಟ್ರಸ್ಟ್​ ಅಧ್ಯಕ್ಷೆ ಮಾನಸಾ ಮಂಜುನಾಥಗೌಡ ಮಾತನಾಡಿ, ವಿದ್ಯಾರ್ಥಿಗಳಿಗೆ ಸಮಾಜವನ್ನು ಬದಲಾವಣೆ ಮಾಡುವ ಶಕ್ತಿ ಇದೆ. ಮಕ್ಕಳ ಪ್ರತಿಭೆಗೆ ಪಾಲಕರ ಬೆಂಬಲವೇ ಕಾರಣವಾಗಿದೆ. ಪ್ರತಿಯೊಬ್ಬರಲ್ಲೂ ಶ್ರದ್ಧೆ, ಭಕ್ತಿ, ಗೌರವವನ್ನು ಬೆಳೆಸಿಕೊಳ್ಳಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net