

ಹುಬ್ಬಳ್ಳಿ: ಸ್ವರ್ಣ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ.ವಿ.ಎಸ್.ವಿ. ಪ್ರಸಾದ ಜನ್ಮ ದಿನ ನಿಮಿತ್ತ ಸೌಥ್ ವೆಸ್ಟರ್ನ್ ರೈಲ್ವೆ ಗುತ್ತಿಗೆದಾರರ ಸಂಘ, ಭಗತ್ ಸಿಂಗ್ ಸೇವಾ ಸಂಘ ಹಾಗೂ ಡಾ.ವಿ.ಎಸ್.ವಿ. ಪ್ರಸಾದ ಅಭಿಮಾನಿ ಬಳಗದಿಂದ ಜ. 9ರಂದು ನಗರದಲ್ಲಿ ವಿವಿಧ ಸಾಮಾಜಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭಗತ್‌ಸಿಂಗ್ ಸೇವಾ ಸಂಘದ ಸದಸ್ಯರಾದ ಲಕ್ಷ್ಮೀಕಾಂತ ಘೋಡಕೆ, ಪ್ರತೀಕ ಕುಂದಗೋಳ,
ಕಳೆದ ಹಲವಾರು ವರ್ಷಗಳಿಂದ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಉದ್ಯಮಿ ಡಾ.ವಿ.ಎಸ್.ವಿ. ಪ್ರಸಾದ ಅವರ ಜನ್ಮದಿನ ಜ.9. ಈ ಹಿನ್ನೆಲೆಯಲ್ಲಿ ಅಂದು ಹಳೇಹುಬ್ಬಳ್ಳಿ ಇಂಡಿಪಂಪ್ ಹತ್ತಿರದ ಸರ್ಕಾರಿ ಪ್ರಾಥಮಿಕ ಶಾಲೆ ನಂ. 19ಕ್ಕೆ ಕಂಪ್ಯೂಟರ್ ಮತ್ತು ಪ್ರಿಂಟರ್, 10 ವೈವ್ ಬೋರ್ಡ್, 4 ಸಿಸಿ ಕ್ಯಾಮರಾ, ಆರ್‌ಒ ವಾಟರ್ ಪ್ಲಾಂಟ್ ಅಳವಡಿಸಲಾಗುವುದು ಎಂದರು.
ಬಳಿಕ ಬಂಜಾರ ಕಾಲನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 65 ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಹಾಗೂ ಸ್ಕೂಲ್ ಬ್ಯಾಗ್, ಕುರ್ಚಿ ನೀಡಲಾಗುವುದು. ಗಬ್ಬೂರಿನಲ್ಲಿರುವ ವಿಶ್ವದರ್ಮ ಅಂಗವಿಕಲರ ಶಾಲೆಯ ವಿದ್ಯಾರ್ಥಿಗಳಿಗೆ ಭೋಜನ ವ್ಯವಸ್ಥೆ ಮಾಡಲಾಗುವುದು. ಮಂಟೂರ ರಸ್ತೆ ಕನ್ಯಾ ನಗರದಲ್ಲಿರುವ ಬಾಲಾಜಿ ದೇವಸ್ಥಾನದ ಗೋಶಾಲೆಗೆ ಮೇವು ವಿತರಿಸಲಾಗುವುದು. ರಾಷ್ಟ್ರೋತ್ಥಾನ ರಕ್ತನಿಧಿ ಸಹಯೋಗದಲ್ಲಿ ಸ್ವರ್ಣ ಸಿಟಿ ಸೆಂಟರ್‌ನಲ್ಲಿ ಬೃಹತ್ ರಕ್ತದಾನ ಶಿಬಿರ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಕುಮಾರ ಜಾಧವ, ರಂಗನಾಯಕ ತಪೇಲಾ, ವೆಂಕಟೇಶ ಹುಟಗಿ, ಹರೀಶ ಗುಂಟ್ರಾಳ, ಶ್ರೀನಿವಾಸರಾವ್, ಅರವಿಂದ ಚವ್ಹಾಣ ಇತರರು ಸುದ್ದಿಗೋಷ್ಠಿಯಲ್ಲಿದ್ದರು.