ತಜ್ಞವೈದ್ಯರ ನೇಮಕಕ್ಕೆ ಅಗತ್ಯ ಕ್ರಮ

oplus_2
oplus_2
Published on

ರಾಮದುರ್ಗ: ಪಟ್ಟಣದ ಸರ್ಕಾರಿ ಆಸ್ಪತ್ರೆಯನ್ನು ಅತ್ಯಾಧುನಿಕ ಸೌಲಭ್ಯಗಳೊಂದಿಗೆ 100 ಹಾಸಿಗೆ ಸಾಮರ್ಥ್ಯಕ್ಕೆ ಹೆಚ್ಚಿಸಲು ಬಜೆಟ್​ನಲ್ಲಿ ಅನುದಾನ ಘೋಷಿಸಿದ ಹಿನ್ನೆಲೆಯಲ್ಲಿ ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್​ ಭಾನುವಾರ ಭೇಟಿ ನೀಡಿದರು.

ಮೇಲ್ದರ್ಜೆಗೇರಿಸುವ ಕಟ್ಟಡ ನಿರ್ಮಾಣ, ಸೌಲಭ್ಯದ ಬಗ್ಗೆ ಪ್ರಸ್ತಾಪಿಸಿ ಆಸ್ಪತ್ರೆಯಲ್ಲಿನ ಸೌಕರ್ಯ, ಆಸ್ಪತ್ರೆಯಲ್ಲಿ ರೋಗಿಗಳಿಗೆ ಒದಗಿಸುತ್ತಿರುವ ಸೌಲಭ್ಯಗಳ ಕುರಿತಾಗಿ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಆಸ್ಪತ್ರೆಯಲ್ಲಿ ಸಮಯಕ್ಕೆ ಸರಿಯಾಗಿ ವೈದ್ಯರು ಲಭ್ಯವಿರುವುದಿಲ್ಲ. ಸ್ತ್ರೀರೋಗ, ಅರಿವಳಿಕೆ ತರಿಲ್ಲ. ಹೆರಿಗೆ ಸಂದರ್ಭದಲ್ಲಿ ಶಸ್ತ್ರಚಿಕಿತ್ಸೆ ಅಗತ್ಯವಿದ್ದಲ್ಲಿ ಕೈಯಲ್ಲಿ ಜೀವ ಹಿಡಿದುಕೊಂಡು ಬೇರೆಡೆಗೆ ಹೋಗುವ ಅನಿವಾರ್ಯತೆ ಇದೆ ಎಂದು ಸ್ಥಳಿಯರು ಸಚಿವರ ಎದುರು ಅಳಲು ತೋಡಿಕೊಂಡರು.

ಜನರ ಸಮಸ್ಯೆಗಳಿಗೆ ಪ್ರತಿಕ್ರಿಯಿಸಿದ ಸಚಿವ ದಿನೇಶ್​ ಗುಂಡೂರಾವ್​, ವೈದ್ಯಕಿಯ ಸೌಲಭ್ಯ ಒದಗಿಸಲು ಸುಸಜ್ಜಿತ ಕಟ್ಟಡ ನಿರ್ಮಾಣ ಕಲ್ಪಿಸುವ ಕುರಿತು ಜಿಲ್ಲಾ ವೈದ್ಯಾಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ಆಸ್ಪತ್ರೆ ಉನ್ನತಿಕರಣ, ಸ್ತ್ರೀರೋಗ ಮತ್ತು ಅರಿವಳಿಕೆ ತರ ನೇಮಕಕ್ಕೆ ಶ್ರೀವೇ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದು ತಿಳಿಸಿದರು.

ಸರ್ಕಾರಿ ವೈದ್ಯರು ಸೇವಾವಧಿ ಹೊರತುಪಡಿಸಿ ಖಾಸಗಿ ಸೇವೆ ಮಾಡಲು ಅಭ್ಯಂತರವಿಲ್ಲ. ತುರ್ತು ಸಂದರ್ಭದಲ್ಲಿ ಕಡ್ಡಾಯವಾಗಿ ಸೇವೆಗೆ ಹಾಜರಾಗಬೇಕು. ಸೇವೆ ಬಗ್ಗೆ ದೂರು ಕೇಳಿ ಬಂದಲ್ಲಿ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಜಿಪಂ ಸಿಇಒ ರಾಹುಲ ಶಿಂಧೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಶಿವಕುಮಾರ, ಮುಖಂಡರಾದ ಪ್ರದಿಪ ಪಟ್ಟಣ, ಅನಿಕೇತ ಪಟ್ಟಣ, ಟಿಎಚ್​ಒ ಡಾ.ನವೀನ ನಿಜಗುಲಿ ಇತರರಿದ್ದರು.

ನಕಲಿ ವೈದ್ಯರ ವಿರುದ್ಧ ಕ್ರಮ: ತಾಲೂಕಿನಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಿರುವ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಗುಂಡೂರಾವ್​, ತಾಲೂಕು ಅಷ್ಟೇಯಲ್ಲ. ರಾಜ್ಯಾದ್ಯಂತ ನಕಲಿ ವೈದ್ಯರ ಹಾವಳಿ ಇದೆ. ಅಂಥವರ ವಿರುದ್ಧ ಶಿಸ್ತು ಕ್ರಮಕ್ಕೆ ಸೂಚಿಸಲಾಗುವುದು. ಕೆಲವರು ಪ್ರಭಾವ ಬಳಿಸಿಕೊಂಡು ನುಣಿಚಿಕೊಳ್ಳಿತ್ತಿದ್ದಾರೆ. ಅಂಥವರ ಮೇಲೆಯೂ ಕ್ರಮಕ್ಕೆ ಸರ್ಕಾರ ಬದ್ಧವಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net