ವಿಶೇಷ ಯೋಗ, ಧ್ಯಾನ, ಪ್ರಾಣಾಯಾಮ ಶಿಬಿರ

12 Dwd 4 - Copy
Published on

ಧಾರವಾಡ: ಇಲ್ಲಿನ ಮೃತ್ಯುಂಜಯನಗರದ ಶ್ರೀ ಮುರುಘಾಮಠದಲ್ಲಿ ಪತಂಜಲಿ ಯೋಗ ಪೀಠ, ಕರ್ನಾಟಕದ ವರಿಷ್ಠ ರಾಜ್ಯಪ್ರಭಾರಿ ಯೋಗಗುರು ಭವರಲಾಲ್ ಆರ್ಯ ಅವರ ಮಾರ್ಗದರ್ಶನದಲ್ಲಿ ಹುಬ್ಬಳ್ಳಿಯ ಪತಂಜಲಿ ವೆಲ್‌ನೆಸ್ ಕೇಂದ್ರದ ಸಹಯೋಗದಲ್ಲಿ ವಿಶೇಷ ಯೋಗ, ಧ್ಯಾನ ಮತ್ತು ಪ್ರಾಣಾಯಾಮ ಶಿಬಿರ ಆರಂಭಗೊ0ಡಿದೆ.
ಶಿಬಿರಕ್ಕೆ ಚಾಲನೆ ನೀಡಿದ ಯೋಗ ಗುರು ಶ್ರೀ ಭವರಲಾಲ್ ಆರ್ಯ ಮಾತನಾಡಿ, ಯೋಗ ನಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕು. ಇಂದಿನ ಕಲುಷಿತ, ಮಾಲಿನ್ಯ ವಾತಾವರಣದಲ್ಲಿ ಆರೋಗ್ಯಯುತ ಜೀವನ ನಡೆಸಲು ಯೋಗ, ಆಯುರ್ವೇದ ಮತ್ತು ಭಾರತೀಯ ಜೀವನ ಪದ್ಧತಿಗಳೇ ಶಾಶ್ವತ ಪರಿಹಾರ. ಯೋಗ, ಧ್ಯಾನ, ಪ್ರಾಣಾಯಾಮಗಳು ನೈಸರ್ಗಿಕ ಪದ್ಧತಿಗಳು. ಇಲ್ಲಿ ಯಾವುದೇ ಉಪಕರಣಗಳ ಅವಶ್ಯಕತೆ ಇಲ್ಲ. ಯಂತ್ರ ಅಥವಾ ಹಣ ಬೇಕಾಗಿಲ್ಲ. ಸಮಯ, ಮನಸ್ಸು ಮತ್ತು ದೃಢ ನಿರ್ಧಾರ ಸಾಕು ಎಂದರು.
ಯೋಗಕ್ಕೆ ಯಾವುದೇ ಜಾತಿ, ಧರ್ಮ, ದೇಶ, ಭಾಷೆ, ಲಿಂಗ, ಜನಾಂಗದ ಭೇಧವಿಲ್ಲ. ಮನಸ್ಸು ಮತ್ತು ಶರೀರ ಒಂದಾಗುವುದೇ ಯೋಗ. ಮುಂದಿನ ದಿನಗಳಲ್ಲಿ ಹುಬ್ಬಳ್ಳಿ- ಧಾರವಾಡ ಮಹಾನಗರದ ಎಲ್ಲ ವಾರ್ಡ್ಗಳಲ್ಲಿ ಒಂದೊ0ದು ನಿರಂತರ ಉಚಿತ ಯೋಗ ಕೇಂದ್ರಗಳನ್ನು ಸ್ಥಾಪಿಸಿ ಯೋಗಮಯ- ಆರೋಗ್ಯಮಯ ಮಹಾನಗರವನ್ನಾಗಿಸುವ ಅಭಿಯಾನ ಮಾಡಲಾಗುವುದು ಎಂದರು.
ಪತAಜಲಿ ವೆಲ್‌ನೆಸ್ ಕೇಂದ್ರದ ಹಿರಿಯ ವೈದ್ಯ ಯೋಗಾಚಾರ್ಯ ಡಾ. ರಾಮ್ ಹಾಗೂ ಯೋಗಗುರು ಜ್ಯೋತಿ ಹಿರೇಮಠ ಅವರಿಂದ ಯೋಗ, ಆಯುರ್ವೇದ, ಪ್ರಾಕೃತಿಕ ಚಿಕಿತ್ಸೆಯ ಮಾರ್ಗದರ್ಶನ ನೀಡಲಾಗುವುದು ಎಂದರು.
ಆಯುಷ್ ಇಲಾಖೆಯ ನಿವೃತ್ತ ಮುಖ್ಯಸ್ಥ ಡಾ. ಶಂಕರ ಹಿರೇಮಠ, ಪತಂಜಲಿ ವೆಲ್‌ನೆಸ್‌ನ ಮಧುಸೂದನ್, ಪತಂಜಲಿ ಯೋಗ ಸಮಿತಿಯ ಉಮಾ ಅಗಡಿ, ರಮೇಶ ಸುಲಾಖೆ, ಎಂ.ಡಿ. ಪಾಟೀಲ, ಲೀಲಾವತಿ ಸಾಂಬ್ರಾಣಿ, ನಾಗರಾಜ, ಮಂಜುನಾಥ, ಹುಬ್ಬಳ್ಳಿ ಹಾಗೂ ನೂರಾರು ಯೋಗ ಸಾಧಕರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net