

ಪಾಂಡವಪುರ: ಪಟ್ಟಣದ ವಿ.ಸಿ ಕಾಲನಿಯಲ್ಲಿ ಪೌರಕಾರ್ಮಿಕರ ಸಂಘಟನೆ ವತಿಯಿಂದ ಶನಿವಾರ ಆಯೋಜಿಸಿದ್ದ ಗ್ರಾಮ ದೇವತೆ ಪಟ್ಟಲದಮ್ಮ ಹಬ್ಬದಲ್ಲಿ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸಿದರು.
ಪೌರಕಾರ್ಮಿಕರು ಸಮಾಜದ ಸ್ವಾಸ್ಥ್ಯ ಕಾಪಾಡುವ ಯೋಧರಿದ್ದಂತೆ. ಅವರಿಗೆ ಸಮಾಜದ ಎಲ್ಲರಿಂದಲೂ ಗೌರವ ಸಲ್ಲಬೇಕಾಗುತ್ತದೆ. ಈ ನಿಟ್ಟಿನಲ್ಲಿ ಪೌರಕಾರ್ಮಿಕರು ಕೂಡ ಬದಲಾವಣೆಯ ಪ್ರಮುಖ ಹಂತದಲ್ಲಿದ್ದಾರೆ. ಅವರ ಮಕ್ಕಳು ಶಿಕ್ಷಣ ಪಡೆದು ಸಮಾಜದ ಎಲ್ಲ ಸ್ಥರಗಳಲ್ಲಿ ಕಾರ್ಯನಿರ್ವಹಿಸುವ ಮೂಲಕ ಸಾಮಾಜಿಕ ಸಮಾನತೆಯ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕಾದದ್ದು ಅತ್ಯಗತ್ಯ ಎಂದು ಪುಟ್ಟರಾಜು ಹೇಳಿದರು.
ಪೌರಕಾರ್ಮಿಕರು ಸಂಭ್ರಮಿಸುವ ಪಟ್ಟಲದಮ್ಮ ಹಬ್ಬ ಎಲ್ಲರ ಆಶೋತ್ತರಗಳನ್ನು ಈಡೇರಿಸಲಿ ಎಂದು ಶುಭ ಹಾರೈಸಿದರು.
ಪುರಸಭಾ ಸದಸ್ಯ ಆರ್.ಸೋಮಶೇಖರ್, ಮುಖಂಡ ಅಶ್ವಥ್ ಅವರು ಮಾಜಿ ಸಚಿವ ಸಿಎಸ್ ಪುಟ್ಟರಾಜು ಅವರನ್ನು ಅಭಿನಂದಿಸಿದರು. ಕಾರ್ಯಕ್ರಮಕ್ಕೂ ಮುನ್ನ ಮಹಿಳೆಯರು ಪುಟ್ಟರಾಜು ಅವರಿಗೆ ಆರತಿ ಬೆಳಗಿ ಸ್ವಾಗತಿಸಿದರು. ಕಟ್ಟೆ ಯೋಗಣ್ಣ, ರಂಗಣ್ಣ, ಅರ್ಜುನ, ಬನ್ನಾರಿ, ಸೋಮು, ಶಿವರಾಜು, ಕುಮಾರ್ ಸೇರಿದಂತೆ ಹಲವರು ಇದ್ದರು.